ಸಾಧು ಜನರ ಸಂಗವ ಮಾಡಿ
(ರಾಗ ಕಾಂಭೋಜ ಛಾಪುತಾಳ)
ಸಾಧು ಜನರ ಸಂಗವ ಮಾಡಿ
ಒಂದಾಧಾರವಾದ ಕಲಿತೆ ||ಪ||
ಸಾಧು ಜನರ ಸಂಗ ಬಿಟ್ಟು
ಅಜ್ಞಾನದಪತ್ತಿಗೆ ಕಲೆತೆ ||ಅ||
ಆಸೆಯೆಂಬೋ ಮಾವಗೆ ನಾನು
ಗ್ರಾಸ ಹಾಕದೆ ಕೊಂದೆನಪ್ಪ
ಮೋಸದ ಆರು ಮೈದುನರ
ದೇಶಾಂತರದಿ ಓಡಿಸಿದೆನು ||
ಚಿತ್ತವೆಂಬೋ ಅತ್ತಿಗೆಯ
ಎತ್ತೋ ಏನೋ ಓಡಿಸಿದೆ , ದು-
ಶ್ಚಿತ್ತವೆಂಬೊ ಅತ್ತೆಯ ಕಣ್ಣು
ಮತ್ತೆ ನಾನೇ ಕಳೆದೆನಪ್ಪ ||
ಹರಿದ್ವೇಷವೆಂಬೊ ಕೂಸಿನ
ಉರುಳು ಹಾಕಿ ಕೊಂದೆನಪ್ಪ
ಪುರಂದರವಿಠಲನೆಂಬೊ
ಸರಸಗಂಡನ ಕೂಡಿದೆನಪ್ಪ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments