ಧಣಿಯ ನೋಡಿದೆನೋ ವೆಂಕಟನ

ಧಣಿಯ ನೋಡಿದೆನೋ ವೆಂಕಟನ

(ರಾಗ ಕಾಪಿ ಅಟತಾಳ) ಧಣಿಯ ನೋಡಿದೆನೋ ವೆಂಕಟನ , ಮನ- ದಣಿಯೆ ನೋಡಿದೆ ಶಿಖಾಮಣಿ ತಿರುಮಲನ || ಚರಣದಂದುಗೆ ಗೆಜ್ಜೆಯವನ , ಪೀತಾಂ- ಬರ ಉಡಿಗೆ ಒಡ್ಯಾಣವಿಟ್ಟವನ ಮೆರೆಯುವ ಮಾಣಿಕ್ಯದವನ , ಚೆನ್ನ ಸರ ಹಾರ ಪದಕ ಕೌಸ್ತುಭ ಧರಿಸಿದವನ || ಕೊರಳೊಳು ವೈಜಯಂತಿ ಇಹನ , ಕಿರು ಬೆರಳ ಮುದ್ರಿಕೆ ಭುಜಕೀರ್ತಿಲೊಪ್ಪುವನ ಅರಳುಕಂಗಳ ನೋಟದವನ , ಸುಳಿ- ಗುರುಳು ನೊಸಲು ಪಟ್ಟಿ ನಾಮ ಹಚ್ಚಿಹನ || ಶಂಖಚಕ್ರವ ಪಿಡಿದವನ , ಕೈ- ಕಂಕಣ ತೋಳ್ಬಂದಿ ಬಾಪುರಿಯವನ ಶಂಖನೂದುವ ಸರ್ವೋತ್ತಮನ , ಭೂ - ವೈಕುಂಠವಿದೆಂದು ಹಸ್ತದಿ ತೋರಿಸುವನ || ಕೇಸಕ್ಕಿ ಅನ್ನ ಉಂಬುವನ , ಬಡ್ಡಿ ಕಾಸು ಬಿಡದ ಹಾಗೆ ಕೂಡಿ ಹಾಕುವನ ಘೋಷಾನಾದಕ್ಕೆ ಒಲಿದಿಹನ , ಮೈಯೊಳ್ ಸೂಸುವ ಗಂಧ ಕಸ್ತೂರಿ ಲೇಪಿತನ || ನೀಟಾದ ವಲ್ಲಿ ಹೊದ್ದಿಹನ , ಹೊರ ಬೇಟೆಯಾಡಿ ಅಂದದಿಂದ ಬರುವನ ನೋಟದಿ ಬಂದು ನಿಂತಿಹನ , ಈ ಸೃಷ್ಟಿಗೊಡೆಯ ಪುರಂದರವಿಟ್ಠಲನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು