ನೋಡಿ ದಣಿಯವು ಕಂಗಳು
(ರಾಗ ಸಾವೇರಿ ಝಂಪೆ ತಾಳ )
ನೋಡಿ ದಣಿಯವು ಕಂಗಳು
ರೂಢಿಯೊಳಗತ್ಯಧಿಕ ರಂಗೇಶನತಿ ಚೆಲುವ || ಪ||
ಕೆಂದಾವರೆಯ ಪೋಲ್ವ ಪದಗಳಿಗೆ ನವರತ್ನ
ಅಂದುಗೆಯ ಮೇಲೆ ಹೊಂಗೆಜ್ಜೆ ಪೊಳೆಯೆ
ಅಂದದಿಂ ಸಕಲ ದೇವೋತ್ತಮರ ಮುಕುಟದೊಲ-
ವಿಂದ ಬೆಳಗುತಿಹ ಕೋಮಲ ಪದಾಬ್ಜಗಳ ||
ಥಳಥಳಿಪ ಶಶಿಯ ಕಾಂತಿಯ ಜರೆವ ಮುಖಕಾಂತಿ
ಪೊಳೆವ ಜಾನುವಿನ ಜಂಘೆಯ ಸೊಂಪಿನ
ಪೊಳೆವ ಊರುಗಳ ಪೀತಾಂಬರಾಹಿತ ಮಧ್ಯ
ಸುಳಿನಾಭಿ ತ್ರಿವಳಿ ಮಣಿಖಚಿತ ವೃಂದಗಳ ಮಿಗೆ ||
ಶ್ರೀ ವತ್ಸಲಾಂಛನ ಕುಂಡಲ ಪ್ರಭೆಯು
ಶ್ರೀ ವಾಸುದೇವನ ಸ್ಮಿತವದನದ
ಪಾವನಾತ್ಮಕನ ಚಂಪಕನಾಸಿಕದ ಬೆಡಗು
ದೇವದೇವನ ನಯನಗಳ ಕಡು ಚೆಲುವ ||
ಮದನಕಾರ್ಮುಕಕೆ ಮಾರ್ಮಲೆವ ಪುರ್ಬಿನ ಗಾಡಿ
ಮುದವೀವ ಕರ್ಣಕುಂಡಲವು ಪೊಳೆಯೆ
ಪದುಮನಾಭನ ಪಣೆಯ ಕಸ್ತೂರಿತಿಲಕವನು
ಯದುಕುಲೋತ್ತಮನ ಮಣಿಖಚಿತ ವೃಂದಗಳ ಮಿಗೆ ||
ಉಭಯ ಕಾವೇರಿಮಧ್ಯದಿ ಶೇಷತಲ್ಪದೊಳು
ಶುಭ ಕ್ರಿಯಾಮೃತ ಶ್ರೀ ಲತಾಂಗಿ ಸಹಿತ
ಅಭಯವನು ಭಕುತರಿಗೆ ಅನವರತ ಕರೆದೀವ
ಪುರಂದರವಿಠಲನ ಪದಯುಗಳ ಕಡು ಚೆಲುವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments