ನಿನ್ನ ದಿವ್ಯ ಮೂರುತಿಯ ಕಣ್ಣುದಣಿಯ ನೋಡಿ
(ರಾಗ ಮೋಹನ ಅಟ ತಾಳ )
ನಿನ್ನ ದಿವ್ಯ ಮೂರುತಿಯ ಕಣ್ಣುದಣಿಯ ನೋಡಿ ಧನ್ಯನಾದೆನೊ ಧರೆಯೊಳು ||ಪ||
ಇನ್ನು ಈ ಭವ ಭಯಕೆ ಅಂಜಲೇತಕೊ ಚೆನ್ನ ಸಿರಿವೆಂಕಟೇಶ ಶ್ರೀಶ ||ಅ||
ಏಸು ಜನ್ಮದ ಪುಣ್ಯ ಬಂದೊದಗಿತೊ ಶ್ರೀ ಸ್ವಾಮಿ ಪುಷ್ಕರಣಿ-
ಯೊಳ್ ಸ್ನಾನ ಜಪತಪ ಮಾಡಿ ವರಹದೇವರ ನೋಡಿ ಶ್ರೀ ಸ್ವಾಮಿ ಮಹಾದ್ವಾರಕೆ
ಶ್ರೀ ಶರೀರವನು ಈಡಾಡಿ ಪ್ರದಕ್ಷಿಣೆ ಮಾಡಿ ಲೇಶದಿಂ ಪೊಗಳುತಲಿ
ಆ ಸುವರ್ಣದ ಗರುಡಕಂಭವನ ನೋಡಿ ಸಂತೋಷದಿಂ ಕೊಂಡಾಡಿದೆ ಬಿಡದೆ ||
ನೆಟ್ಟನೆರಡನೇ ದ್ವಾರವನೆ ದಾಂಟಿ ಪೋಗುತಲಿ ದಟ್ಟಣಿಯು ಬಹು ಜನದಲಿ
ಗಟ್ಟಿ ಮನದಲಿ ತಲೆಯ ಚೆಟ್ಟಿಡುತ ನೆಟ್ಟನೆ ಕಟ್ಟಾಂಜನಕೆ ತಾ ಬರುತಲಿ
ಕೃಷ್ಣಾಜಿನದವರ ಪೆಟ್ಟುಗಳ ಕಾಣುತಲಿ ಕಂಗೆಟ್ಟು ಹರಿಯೆನುತಲಿ
ಬೆಟ್ಟದಧಿಪತಿ ನಿನ್ನ ದೃಷ್ಟಿಂದ ಕಾಣುತಲಿ ಸುಟ್ಟಿತೆನ್ನಯ ದುರಿತವು ಸರ್ವವು ||
ಶಿರದಲಿ ರವಿಕೋಟಿ ತೇಜದಿಂದೆಸೆವಂಥ ವರ ಕಿರೀಟವು ಕುಂಡಲ
ಕೊರಳೊಳಿಹ ಸರಿಗೆ ವೈಜಯಂತಿಯ ಮಾಲೆ ಪರಿಪರಿಯ ಹಾರಗಳನು
ಉರದಿ ಶ್ರೀವತ್ಸವನು ಕರದಿ ಶಂಖಚಕ್ರಗಳು ವರನಾಭಿ ಮಾಣಿಕವನು
ನಿರುಪಮ ಮಣಿಖಚಿತ ಕಟಿಸೂತ್ರ ಪೀತಾಂಬರ ಚರಣದ್ವಯದಂದುಗೆಯನು ಇನ್ನು ||
ಇಕ್ಷುಚಾಪನ ಪಿತನ ಪಕ್ಷೀಂದ್ರವಾಹನನೆ ಲಕ್ಷ್ಮೀಪತಿ ಕಮಲಾಕ್ಷನೆ
ಅಕ್ಷಯ ಅಜಸುರೇಂದ್ರಾದಿ ವಂದಿತನೆ ಸಾಕ್ಷಾಜ್ಜಗನ್ನಾಥನೆ
ರಾಕ್ಷಸಾಂತಕನೆ ನಿರಪೇಕ್ಷ ನಿತ್ಯ ತೃಪ್ತನೆ ನಿರುಪಮ ನಿಸ್ಸೀಮನೆ
ಕುಕ್ಷಿಯೊಳಗಿರೇಳು ಲೋಕವನು ತಾಳ್ದವನೆ ರಕ್ಷಿಸುವುದೆಂದು ದಯದಿ ಮುದದಿ ||
ಉರಗಗಿರಿ ಅರಸು ನಿಮ್ಮ ಚರಣಗಳ ಕಂಡ ಮೇಲೆ ಉರಗ ಕರಿ ವ್ಯಾಘ್ರ ಸಿಂಹ
ಅರಸು ಚೋರಾಗ್ನಿ ವೃಶ್ಚಿಕ ಮೊದಲಾದ ಪರಿಪರಿಯ ಬಹಳ ಭಯವು
ಪರಮ ವಿಷಯಲಂಪಟದೊಳಗೆ ನಾ ಸಿಗದಂತೆ ಕರುಣಿಸುವುದೊಲಿದು ದಯದಿ
ಸ್ಮರಗಧಿಕಲಾವಣ್ಯ ತಂದೆ ಪುರಂದರವಿಠಲ ಶರಣಜನ ಕರುಣಾರ್ಣವ ದೇವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments