ನಿನ್ನ ದಯದೃಷ್ಟಿಗೆ ಚಿತ್ತವಿಲ್ಲದಿರೆ

ನಿನ್ನ ದಯದೃಷ್ಟಿಗೆ ಚಿತ್ತವಿಲ್ಲದಿರೆ

(ರಾಗ ಮೋಹನ ಅಟ ತಾಳ ) ನಿನ್ನ ದಯದೃಷ್ಟಿಗೆ ಚಿತ್ತವಿಲ್ಲದಿರೆ ಮುನ್ನೇನು ಗತಿಯು ಎನಗೆ ||ಪ|| ಚೆನ್ನಾರ ಚೆಲುವ ಕೇಶವರಾಯ ನಂಬಿದೆನೊ ಧನ್ಯನ ಮಾಡಿ ಸಲಹೋ ದೇವ ||ಅ|| ಅರಿಯೆನೋ ತಾರತಮ್ಯನುಸಾರಗಳಿಂದ ಗುರು ಹಿರಿಯರನು ಭಜಿಸದೆ ಗರುವ ಅಹಂಕಾರದಲಿ ಐಶ್ವರ್ಯಮದದಿಂದ ಪರರ ನಿಂದಿಸುತದಲಿದ್ದೆ ಅರುಣೋದಯದಲೆದ್ದು ಕ್ಷುದ್ಬಹಳವಹುದೆಂಡು ಮೋರೆ ತೊಳೆಯದೆ ಮೆಲ್ಲುತಿದ್ದೆ ಘೋರ ದುರಿತಗಳ ಎಣಿಸಿದರೆ ನೆಲೆಗಾಣೆ ಮೊರೆಹೊಕ್ಕೆ ಹರಿ ರಕ್ಷಿಸೊ || ಸ್ನಾನ ಮಾಡಿದರೆನ್ನ ದೇಹ ತಾಳದು ಎಂದು ಕಳ್ಳ ನಾಮವ ತಿದ್ದುವೆ ಘನ್ನ ಬ್ರಹ್ಮರು ಉಪನ್ಯಾಸ ಮಾಡಿದರೆ ಕಂಡು ಕೋಪದಿ ನೂಕುವೆ ದೀನತ್ವದಿಂದ ಒಬ್ಬರಿಗೆ ರುವ್ವಿ ಕೊಡದಲೆ ಧನ ಗಳಿಸಿ ಕೂಡ್ಹಾಕುವೆ ಏನು ಮಾಡಲಿ ಜನ್ಮ ವ್ಯರ್ಥವಲ್ಲದೆ ಕೆಟ್ಟೆ ನೀನೇ ರಕ್ಷಕನು ಕಾಯೋ ದೇವ || ಸತಿಸುತರ ಮೆಚ್ಚಿ ತಾಯಿತಂದೆಯ ಕೂಡೆ ಅತಿದ್ವೇಷವನು ಮಾಡುವೆ ಪ್ರತ್ಯೇಕ ವಂಟಿಯಲಿ ವಗತನದಿ ಮನೆಯೊಳಗೆ ನಿಗ್ರಹವ ಮಾಡುವೆ ಕಥೆ ಪುರಾಣಶ್ರವಣ ಮಾಡುವವರ ಬಳಿಗ್ಹೋಗಿ ಪ್ರತಿಭಂಡ ಮಾತಾಡುವೆ ಚಿತ್ತಜನ ಪಡೆದಂಥ ಅಚ್ಯುತನೆ ಲಾಲಿಸೋ ಕುತ್ಸಿತ ಬುದ್ಧಿಗಳ ಬಿಡಿಸೋ ದೇವ || ಇರುಳು ಹಗಲು ಮನಸಿನೊಳು ಕ್ಷುದ್ರ ಮಾತಿನ ಧ್ಯಾನ ಹರಿಯೆಂದು ಸ್ಮರಿಸಲಿಲ್ಲ ಧರೆಯಲಿಹ ಪರರಂಗನೆಯರ ಚೆಲುವಿಕೆ ಕಂಡು ಬಿದ್ದ್ಹೊರಳಿ ಕೆಟ್ಟೆನಲ್ಲ ಹೊರವರು ಎನ್ನ ಮುವ್ವತ್ತೆರಡು ಮಂದಿಗಳ ಗುರಿಗೆ ಬಲಿಯಾದೆನಲ್ಲ ಶ್ರೀರಮಣ ಕ್ಷಮಿಸಯ್ಯ ಸರ್ವಾಪರಾಧಗಳ, ನಿನ್ನ ಕಿಂಕರನೆನಿಸೊ || ಕೆಟ್ಟ ಅಜಮಿಳಗೆ ನೀ ಕೊಟ್ಟೆ ಮುಕುತಿಯ ಬೇಗ, ಕಾಯಿದೆ ದ್ರೌಪದಿ ಮಾನವ ಸೃಷ್ಟೀಶ ನೀನರಿಯೆ ಅವರ ಸರಿಯಾಗುವೆನೆ, ದಾಸಾನುದಾಸ ನಾನು ಇಟ್ಟು ನಿಮ್ಮ ಪಾದದಡಿಯಲ್ಲಿ ಹಲಕಾಲ ಮನವಿಡ್ವಂತೆ ಮಾಡಲೆನ್ನ ಸಟೆಯನಾಡುವನಲ್ಲ ಪುರಂದರವಿಠಲ ದಡ ಸೇರಿಸೋ ಎನ್ನನು ದೇವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು