ತಾಳಿಯ ಹರಿದು ಬಿಸಾಟೆ
( ರಾಗ ನಾದನಾಮಕ್ರಿಯೆ ಅಟತಾಳ)
ತಾಳಿಯ ಹರಿದು ಬಿಸಾಟೆ, ಇಂಥ
ಕೀಳು ದೇವತೆಗಳ ಹೆಸರಲ್ಲಿ ಕಟ್ಟಿದ ||ಪ||
ಒಡತಿಯೆಲ್ಲಮ್ಮನೆಂದು ಇಲ್ಲದ್ಹರಿಕೆ ಹೊತ್ತು
ಸಿಡಿಯಾ ಊರಿಸಿಕೊಂಡು ಜೋಲಾಡುವೆ
ಕಡುಕೋಪದಿಂದ್ಯಮನವರು ಶಿಕ್ಷಿಸಲು ನಿ-
ನ್ನೊಡನೆ ಬಂದಾಗ ರಕ್ಷಿಸುವಳೆ ಮೂಳಿ ||
ಹೊಸ ನವಣೆಯ ಹುಗ್ಗಿ ಹೊಸ್ತಿಲ್ಹುಣ್ಣಿಮೆದಿನ
ಹಸನಾಗಿ ಮಾಡಿ ಹೊಸ್ತಿಲ ಪೂಜೆಯ
ನಿಶಿಯಲಿ ಗೆಯ್ವುದು ತರವಲ್ಲ ಇದರಿಂದ
ಅಸಿಪತ್ರ ವನದಲ್ಲಿ ಬಳಲುವೆ ಮೂಳಿ ||
ಬನದ ಹುಣ್ಣಿಮೆ ದಿನ ನೂರೆಂಟು ಪಲ್ಯಗ-
ಳನು ಮಾಡಿ ಭಕ್ತಿಯಿಂ ಪೂಜಿಸುವೆ
ದಿನಪನ ಸುತನ ದೂತರು ಎಳೆದೊಯ್ವಾಗ
ಬನದ ಶಂಕರಿ ಕಾಯಲರಿವಳೆ ಮೂಳಿ ||
ಚಂದಮ್ಮನ್ಹೆಸರಿಟ್ಟಲಂಕಾರಗಳ ಮಾಡಿ
ನಂದನವ ನೋಡಿ ಸುಖಪಡುವ
ಮುಂದುಗಾಣದೆ ಎಳೆದೊಯ್ದೆಮಪುರದೊಳು
ಕೊಂದರೆಂಬುದು ಕೇಳಿ ತಿಳಿಯಲಿಲ್ಲವೇ ಮೂಳಿ ||
ಭಾರತದ್ಹುಣ್ಣಿಮೆ ದಿನ ದೇವತೆಯ ಮಾಡಿ
ಹೂರಣದಾರತಿಯನು ಬೆಳಗಿ
ಸೀರೆ ಕಳೆದು ತೊಪ್ಪಲುಡುವಾದುಚಿತವಲ್ಲ
ರೌರವನರಕಕೆ ಇದುವೆ ಕೇಳೆ ಮೂಳಿ ||
ದುರುಳೆ ಭವಾನಿಯ ಬಿರುದೆಂದು ಕವಡೆಯ
ಸರ ಕಂಠದಲಿ ಕಟ್ಟಿ ಕಮಠನುಟ್ಟು
ಭರದಲ್ಲಿ ಹಡಗಿಲಿ ಕಡೆಯಾಗದಲೆ ವೈ-
ತರಣಿನರಕ ನಿನಗಹುದು ಮೂಳಿ ||
ಚೆನ್ನಾಗಿ ನಾಗರ ಉಪವಾಸವನು ಮಾಡಿ
ಮಣ್ಣು ಹುತ್ತಿಗೆ ಹಾಲು ಎರೆದು ಬರುವೆ
ವನ್ನಜಾಪ್ತನ ಪುತ್ರನಲ್ಲಿ ದಂಡಿಸುವಾಗ
ನಿನ್ನ ನಾಗರ ಮಾತಾಡುವನೇನೆ ಮೂಳಿ ||
ಕಂಚಿನ ಗಡಿಗೆ ಸೌಭಾಗ್ಯ ಕೊಡುವುದೆಂದು
ಅರ್ಚಿಸುವೆಲೆ ನೀ ಮಾಡುವ ತಪ್ಪಿಗೆ
ಕಿಚ್ಚಾಗಿ ಕಾಲನಾಳುಗಳು ನಿನ್ನನು ಬಹು
ನುಚ್ಚು ನುಚ್ಚು ಮಾಡಿ ಕೊಲ್ವರೆ ಮೂಳಿ ||
ಸಿರಿ ಬ್ರಹ್ಮಾದಿಗಳೊಡೆಯನು ಹರಿಯಿರಲಾಗಿ
ಹಿರಿಯನೊಡೆಯನೆಂದು ಕಲ್ಪಿಸುತ
ಸರತೊಟ್ಟಿಲೇರಿಸಿ ಪೆಸರಿಟ್ಟು ಕರೆವೆ ನಿ-
ನ್ನವರೆ ಯಮಕಿಂಕರರು ಕೇಳೆ ಮೂಳಿ ||
ಕರಿಮಣಿ ಕೇಶವಿಲ್ಲದ ಮುಂಡೆ ಕರೆತಂದು
ಸಿರಿ ಸಹದೇವಿಯೆಂದರ್ಚಿಸುವೆ
ಹಿರಿಯರ ಸಮ್ಮತವಲ್ಲಿದು ಎಂದೆಂದು
ನರಕದೊಳುರುಳುವೆ ನಿಶ್ಚಯವೆಲೆ ಮೂಳಿ ||
ಖಂಡೆರಾಯನ ಮಾಡಿ ಕೆಂಡದ ರೊಟ್ಟಿಯ
ಗುಂಡಿಗೆ ತುಪ್ಪವನರ್ಪಿಸುವೆ
ಚಂಡ್ಯೆಮನವರು ಕೂಡಿ ಕೊಂಡೊಯ್ದಿಡುವಾಗ
ಖಂಡೇರಾಯ ಕಾದುಕೊಂಡಾನೆ ಮೂಳಿ ||
ಹಡೆದ ಮಕ್ಕಳ ಮುಂಜಿ ಮದುವೆಗೆ ನೇಮಿಸಿ
ಮಡಿವಾಳತಿಯ ಅಧಃಕೇಶ ತಂದು
ಸಡಗರದಲಿ ಸ್ಥಾಪಿಸುವೆ ಕುಂಭೀಪಾಕದೊ-
ಳಡಿಗೆಯ ಮಾಡಿಸುವರು ನಿನ್ನ ಮೂಳಿ ||
ಜಲದೇವರೆಂದು ಮೂರೆಡೆಗೆ ದೀಪವ ತುಂಬಿ
ಜಲಜನಾಭನಿಗೆ ಅರ್ಪಿತವಲ್ಲದ
ಮಲವುಂಡು ಸತ್ಕುಲ ಕೆಡಿಸುವೆ ನಿನ್ನ ಮೈ
ಹೊಳನಾರು ಚೆನ್ನಾಗಿ ಯಮನಾಳು ಮೂಳಿ ||
ಪರಿಪರಿ ವಾದ್ಯಸಂಯುಕ್ತ ಮೈಯುಬ್ಬಿಸಿ
ಹರುಷದಿ ಈಚಲಗೊನೆಯ ತಂದು
ವರಮಂದಿರದೊಳು ಪೂಜಿಸುವೆ ನೀ ಕಾಲನ
ನಿರಯದಿವರು ಕೊರೆದು ದಂಡಿಪರೆಲೆ ಮೂಳಿ ||
ಹಿಂದಿನ ಅನಾಚರವೇನಾದರಾಯಿತು
ಮುಂದಾರು ಮುಕುತಿ ಪಥವ ಬಯಸಿ
ಕಂದೆರೆದು ನೋಡದನ್ಯ ದೈವಗಳ ಪು-
ರಂದರವಿಠಲನ ಭಜಿಸೆಲೆ ಮೂಳಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments