ತಪ್ಪುಗಳೆಲ್ಲವ ಪರಿಹರಿಸುವ ನಮ್ಮಪ್ಪನಲ್ಲವೆ ನೀನು
( ರಾಗ ಮೋಹನ ಆದಿ ತಾಳ)
ತಪ್ಪುಗಳೆಲ್ಲವ ಪರಿಹರಿಸುವ ನಮ್ಮಪ್ಪನಲ್ಲವೆ ನೀನು ||ಪ||
ಅಷ್ಟಾದರು ಎನ್ನವಗುಣ ಎಣಿಸದೆ ಸತ್ಯ ಸಂಕಲ್ಪ ತಿಮ್ಮಪ್ಪ ನೀನು ||ಅ||
ಬೆಳಗಿನ ಝಾವದಿ ಹರಿಯ ಸ್ಮರಣೆಯ ಮಾಡದಿರುವುದು ತಪ್ಪು
ಮಲಮೂತ್ರ ವಿಸರ್ಜನೆ ಮೃತ್ತಿಕೆಯಲಿ ಮಲವ ತೊಳೆಯದಿರುವುದು ತಪ್ಪು
ತುಳಸಿ ವೃಂದಾವನ ಗೋಸೇವೆಗೆ ಆಲಸ್ಯ ಮಾಡುತಲಿರುವುದು ತಪ್ಪು
ನಳಿನಸಹೋದರನಿಗರ್ಘ್ಯವನೀಯದೆ ಕಲಿವ್ಯಾಸಂಗದಲಿರುವುದು ತಪ್ಪು ||
ದಿನದಿನ ಉದಯ ಸ್ನಾನ ಮಾಡದ ತನು ವಂಚನೆಯಾ ತಪ್ಪು
ಮುನಿಸುರ ಭೂಸುರರಾರಾಧಿಸದೆ ಧನ ವಂಚನೆಯ ತಪ್ಪು
ಕ್ಷಣ ಗುಣ ಜಿಜ್ಞಾಸಿಲ್ಲದೆ ದುರ್ಜನರ ಸಂಸರ್ಗದ ತಪ್ಪು
ವನಜಾಕ್ಷ ನಿನ್ನ ಧ್ಯಾನವ ಮಾಡದೆ ಮನ ವಂಚನೆಯ ತಪ್ಪು ||
ಕಣ್ಣಿಲಿ ಕೃಷ್ಣಾಕೃತಿಯ ನೋಡದೆ ಪರಹೆಣ್ಣಿನ ನೋಡಿದ ತಪ್ಪು
ಅನ್ನವನರ್ಪಿಸದೆ ಅಜ್ಞಾನದಿ ಉಣ್ಣುವ ನಾಲಿಗೆ ತಪ್ಪು
ನಿನ್ನ ಕಥಾಮೃತವಿಲ್ಲದೆ ಹರಟೆಯ ಮನ್ನಿಸುವ ಕಿವಿ ತಪ್ಪು
ಚಿನ್ಮಯಮೂರುತಿ ಚರಣೆಕ್ಕೆರಗದೆ ಉನ್ಮತ್ತೆಯ ತಪ್ಪು ||
ಆನಂದನ ಸಂಕೀರ್ತನೆ ಮಾಡದೆ ಹೀನವಿವಾದದ ತಪ್ಪು
ಶ್ರೀನಾಥಾರ್ಚನೆ ಇರಲೂಳಿಗವ ಮಾಡಿದ ಕೈಯ ತಪ್ಪು
ಶ್ರೀನಿರ್ಮಾಲ್ಯ ವಿರಹಿತ ಸುರಭಿಯ ಘ್ರಾಣದ ನಾಸಿಕ ತಪ್ಪು
ಶ್ರೀ ನಾರಾಯಣನ ವೇಷಗೆಯ್ಯದನ ನಟನೆ ಪಾದದ ತಪ್ಪು ||
ಯಜ್ಞಾತ್ಮಗೆ ಯಜ್ಞವರ್ಪಿಸದೆ ಕಾಮ್ಯ ಯಜ್ಞಮಾಡಿದ ತಪ್ಪು
ಅಜ್ಞಾನ ಜ್ಞಾನದಲಿ ಕ್ಷಣ ಕ್ಷಣ ಅಘಗಳ ಗಳಿಸುವ ತಪ್ಪು
ಆಗತ ಶೌಚದ ಕರ್ಮವ ಜರೆದು ಸಮಗ್ರ ಗುಹ್ಯದ ತಪ್ಪು
ಯಜ್ಞೇಶ ಮಧ್ವಪತಿ ಪುರಂದರವಿಠಲನ ವಿಸ್ಮರಣೆಯ ತಪ್ಪು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments