ಮೆಚ್ಚದಿರು ಈ ಭಾಗ್ಯ
(ರಾಗ ಕಾಂಭೋಜ ಝಂಪೆ ತಾಳ )
ಮೆಚ್ಚದಿರು ಈ ಭಾಗ್ಯ ಹುಚ್ಚು ಮಾನವ ||ಪ ||
ವೆಚ್ಚವಾಗ್ಹೋಗುವುದು ಏಸೊಂದು ಪರಿಯ ||ಅ||
ಹದಿನೆಂಟು ಕೋಟಿ ಧನ ಉದಯಕಾಲಕೆ ಬರಲು
ಒದಗಿದಾಗಾಗಲೇನು ಕರ್ಣಗೆ
ಹದವರಿದು ಹಾಗದಾ ಕಾಸಿಲ್ಲದೇ ಕೊಟ್ಟು
ತುದಿಗೆ ಮಧ್ಯಾಹ್ನ ದಾರಿದ್ರನೆನಿಸುವನು ||
ಮುತ್ತು ಮಾಣಿಕ್ಯ ನವರತ್ನ ಚೌಕಳಿಗಳು
ಎತ್ತ ನೋಡಿದರು ಸಿರಿ ಓಯೆಂಬಳು
ಸತ್ಯ ಹರಿಶ್ಚಂದ್ರನು ಮತ್ತೆ ಸುಡುಗಾಡಿನಲಿ
ಎತ್ತಲಿಲ್ಲವೆ ಹೆಣಕೆ ಹಾಗದಾ ಕಾಸ ||
ಬೆಳ್ಳಿ ಭಂಗಾರ ಹರಿವಾಣಗಳು ಮನೆಯೊಳಗೆ
ತುಳುಕುತಿಹ ಕನಕದ ರಾಶಿಗಳು
ಘಳಿಗೆಯೊಳು ಈ ಭಾಗ್ಯ ಕಾಡ ಬೆಳದಿಂಗಳು
ಉಳಿದೊಬ್ಬರ ಕಾಣೆ ಚರಲಕ್ಷ್ಮಿಯೆಂದು ||
ದೇವತೆಗಳನೆ ಕೈಯೊಳ್ ಸೆರೆ ಪಿಡಿತಂ-
ದವ ಬಲಿತಿಹ ರಾವಣನ ಬದುಕೇನಾಯಿತು
ಜೀವರ ಪಾಡೇನು ನಾವು ದೊರೆಯೆಂಬೋದಕ್ಕೆ
ಸಾವಿನ ಮನೆ ಪೊಕ್ಕು ಸಹಸಪಡಬಹುದೆ ||
ಇಂದು ಈ ಪರಿಯೊಳನಂತ ರೂಪಾದರು
ಎಂತು ಪೇಳಲಿ ಇವರ ಪೆಸರುಗಳನು
ಸಂತಸದಿ ವರದ ಪುರಂದರವಿಠಲನ
ಅಂತರಂಗದಿ ಭಜಿಸಿ ಸುಖಿಯಾಗು ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments