ಯಮ ತನ್ನ ಪುರದಿ ಸಾರಿದನು

ಯಮ ತನ್ನ ಪುರದಿ ಸಾರಿದನು

( ರಾಗ ಕಾಮವರ್ಧನಿ/ಪಂತುವರಾಳಿ ಛಾಪುತಾಳ) ಯಮ ತನ್ನ ಪುರದಿ ಸಾರಿದನು, ನಮ್ಮ ಕಮಲನಾಭನ ದಾಸರನು ಮುಟ್ಟದಿರೆಂದು ||ಪ|| ಭುಜದಲೊಪ್ಪುವ ಶಂಖ ಚಕ್ರ ಮುದ್ರಾಂಕಿತ ನಿಜ ದ್ವಾದಶ ನಾಮ ಧರಿಸಿಪ್ಪರ ತ್ರಿಜಗ ವಂದಿತ ತುಳಸಿಯ ಮಾಲೆ ಧರಿಸಿದ ಸುಜನರುಗಳ ಕೆಣಕದೆ ಬನ್ನಿರೊ ಎಂದು || ಬೇವ್ಮಡಿಯನುಟ್ಟು ಬೆನ್ನು ಸಿಡಿಯನೇರಿ ಚಿಮ್ಮುತ ಓಲಿ ಬೊಬ್ಬೆಗಳಿಡುತ ಕರ್ಮಕ್ಕೆ ಗುರಿಯಾಗಿ ಪ್ರಾಣಿಹಿಂಸೆಯ ಮಾಳ್ಪ ಬ್ರಹ್ಮತ್ಯಕಾರರ ಎಳೆದು ತನ್ನಿರೋ ಎಂದು || ತಾಳದಂಡಿಗೆ ನೃತ್ಯಗೀತ ಸಮ್ಮೇಳದಿ ಊಳಿಗವನು ಮಾಳ್ಪ ಹರಿದಾಸರ ಕೇಳುತ್ತಲೇ ಕರವೆತ್ತಿ ಮುಗಿದು ಯಮ- ನಾಳುಗಳೆಂದು ಹೇಳದೆ ಬನ್ನಿರೊ ಎಂದು || ಗುರು ನಿಂದಕರ ಹಿರಿಯರ ದೂಷಿಸುವರ ಪರಧನಗಳನಪಹರಿಸುವರ ಅರವಾಣಿಕಾರರ ಉರುಳಿಸಿ ಬಾಯೊಳು ಅರಗನು ಕಾಯಿಸಿ ಸುರಿದು ಕೊಲ್ಲಿರೊ ಎಂದು || ಮಾತಾಪಿತರ ದುರ್ಮತಿಯಿಂದ ಬೈಯುವ ಪಾತಕರ ಪರದ್ರೋಹಿಗಳ ನೀತಿಯನರಿಯದ ನರರ ತುತಿಸುವರ ಘಾತಿಸಿ ಎಳೆ ತಂದು ಕಡಿದು ಕೊಲ್ಲಿರೊ ಎಂದು || ಅನ್ಯದೈವ ಅನ್ಯಮಂತ್ರ ತಂತ್ರವ ಬಿಟ್ಟು ಪನ್ನಗಶಯನನೆ ಗತಿಯೆನ್ನುತ ಉನ್ನತ ಪುರಂದರವಿಠಲನ ಭಜಿಪ ಪ್ರ- ಸನ್ನರುಗಳ ಕೆಣಕದೆ ಬನ್ನಿರೊ ಎಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು