ತಂಗಿಗ್ಹೇಳಿದ ಕೃಷ್ಣ ಚಂದದಲಿ ಬುದ್ಧಿ
( ರಾಗ ಕಾಂಭೋಜಿ ಝಂಪೆ ತಾಳ)
ತಂಗಿಗ್ಹೇಳಿದ ಕೃಷ್ಣ ಚಂದದಲಿ ಬುದ್ಧಿ ||ಪ||
ಅತ್ತೆಯ ಮನೆಯಲ್ಲಿ ಇರುವಂಥ ಸುದ್ದಿ ||ಅ||
ಯಾರೇನು ಅಂದರು ಮೋರೆಯನು ತಿರುವದಿರು
ಮೋರೆ ಮೇಲೆ ಕೈಯೆತ್ತಿ ಬಲ್ಲಳೆಂದೆಣಿಸಿ
ವಾರಿಗೇವರ ಕೂಡಿ ನೀರನ್ನು ತರುವಾಗ
ವಾರೆಗಣ್ಣಿಲಿ ನೋಟ ನೋಡದಿರು ಕಂಡ್ಯ ||
ಪರರ ಒಡವೆಯ ಕಂಡು ದುರುಳ ಮಾತಾಡದಿರು
ನೆರೆಹೊರೆಯರಿಗೆ ನೀನು ತಲೆವಾಗಿ ನಡೆಯೆ
ಪರರ ಮಾತುಗಳಿಂದ ದುರುಳಳೆಂದು ಎಣಿಸಬೇಡ
ನೆರೆಹೊರೆಯರ ಕಂಡು ನೀ ಬದುಕು ಮಾಡಮ್ಮ ||
ಭಂಗಾರದ ಪೇಟೆಯೊಳು ಅಂಗಡಿಗೆ ಹೋಗದಿರು
ಅಂಗನೇರಿಗೆ ಮಾನಭಂಗಾಗಿ ನಡೆಯೆ
ಅಂಗನೇರಿಗೆ ನಿನ್ನಂತರಂಗವ ಹೇಳದಿರು
ಭಂಗಾರವಸ್ತ್ರಗಳು ಮುಚ್ಚಿಕೊಳ್ಳಮ್ಮ ||
ಹಾಕಿದ್ದು ನೀನುಂಡು ಬೇಕೆಂದು ಬೇಡದಿರು
ಸಾಕು ಸಾಕು ಎಂಬ ನಾಚಿಕೆಯ ಹಿಡಿಯೆ
ನಾಕುಮಂದಿಯರೊಡನೆ ಕೋಕೆ ಮಾತಾಡದಿರು
ಲೋಕದೊಳಿವಳೊಬ್ಬ ಮೂಗಿಯೆಂದೆನಿಸೆ ||
ಇಷ್ಟರು ಅಂದರು ನಿಷ್ಠೂರವಾಡದಿರು
ಘಟ್ಟಿ ಮಾಡಮ್ಮ ನಿನ್ನ ಮನಸು
ಸೃಷ್ಟಿಯೊಳಗೆ ನಮ್ಮ ಪುರಂದರ ವಿಠಲನ್ನ
ಶ್ರೇಷ್ಠನಾದ ಕೃಷ್ಣನ್ನ ತಂಗಿಯೆಂದೆನಿಸೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments