ನಾರಾಯಣ ಎನ್ನಿರೋ

ನಾರಾಯಣ ಎನ್ನಿರೋ

ರಾಗ ಕಮಾಚ್/ಅಟ್ಟ ತಾಳ ನಾರಾಯಣ ಎನ್ನಿರೋ, ಶ್ರೀ ನರಹರಿ ಪಾರಾಯಣ ಮಾಡಿರೋ || ಪಲ್ಲವಿ || ನಾರಾಯಣನೆಂದು ಅಜಮಿಳನು ಕೈವಲ್ಯ ಸೇರಿದನೆಂಬೊ ಸುದ್ದಿಯ ಕೇಳಿ ಅರಿಯಿರಾ || ಅನು ಪಲ್ಲವಿ || ಕಾಶಿಗೆ ಹೋಗಲೇಕೆ, ಕಾವಡಿ ಪೊತ್ತು ಬೇಸತ್ತು ತಿರುಗಲೇಕೆ ವಾಸುದೇವನ ನಾಮ ಬಾಯ್ತುಂಬ ನೆನೆದರೆ ಕ್ಲೇಶಗಳೆಂಬುದನು ಲೇಶ ಮಾತ್ರವಿಲ್ಲದೆ || ೧ || ಚೋರರ ಭಯವಿಲ್ಲವೊ, ಹರಿನಾಮಕ್ಕೆ ಯಾರ ಅಂಕೆಯಿಲ್ಲವೊ ಊರನಾಳುವ ದೊರೆ ನೀತಿ ಭೀತಿಗಳಿಲ್ಲ ಘೊರಪಾತಕವೆಲ್ಲ ದೂರ ಮಾಡುವುದಿಕ್ಕೆ || ೨ || ಸ್ನಾನವ ಮಾಡಲೇಕೆ, ಮಾನವರಿಗೆ ಮೌನ ಮಂತ್ರಗಳೇಕೆ ದೀನಪಾಲಕ ನಮ್ಮ ಬೆಟ್ಟದೊಡೆಯನ ಧ್ಯಾನಕೆ ಸರಿಯುಂಟೆ ಪುರಂದರವಿಠಲನ || ೩ || ~~~*~~~ ಅಜಮಿಳ - ಅಜಾಮಿಳ; ಕಾನ್ಯಕುಬ್ಜದ ಬ್ರಾಹ್ಮಣ. ದುರಾಚಾರಿಯಾಗಿದ್ದು ಸಾಯುವ ಗಳಿಗೆಯಲ್ಲಿ ತನ್ನ ಮಗನಾದ ನಾರಾಯಣನ್ನು ಕರೆದ; ನಾರಾಯಣನೆಂಬ ಹೆಸರನ್ನು ಹೇಳಿದುದೇ ಅವನ ಸದ್ಗತಿಗೆ ಕಾರಣವಾಯಿತು. ಕಾವಡಿ - ಅಡ್ಡೆ.
ದಾಸ ಸಾಹಿತ್ಯ ಪ್ರಕಾರ
ಬರೆದವರು