ನೆಚ್ಚದಿರೀ ಭಾಗ್ಯ ಯಾರಿಗೂ ಸ್ಥಿರವಿಲ್ಲ

ನೆಚ್ಚದಿರೀ ಭಾಗ್ಯ ಯಾರಿಗೂ ಸ್ಥಿರವಿಲ್ಲ

(ರಾಗ ಸೌರಾಷ್ಟ್ರ ಅಟ ತಾಳ ) ನೆಚ್ಚದಿರೀ ಭಾಗ್ಯ ಯಾರಿಗೂ ಸ್ಥಿರವಿಲ್ಲ ನಿಶ್ಚಯವೆಚ್ಚರಿಕೆ ||ಪ|| ಹೆಚ್ಚದೆ ಹಿಗ್ಗದೆ ಇದ್ದರೆ ಲೋಕಕ್ಕೆ ಮೆಚ್ಚು ಕೇಳೆಚ್ಚರಿಕೆ ||ಅ|| ಪೊಡವಿಪನೊಲುಮೆಯ ಕಡುನೆಚ್ಚಿ ಗರ್ವದಿ ನಡೆಯದಿರೆಚ್ಚರಿಕೆ ಕೊಡನ ಅಂಧಕ ಪೊತ್ತು ನಡೆವಂತೆ ಅಧಿಕಾರ ಕಡೆಯಲ್ಲಿ ಎಚ್ಚರಿಕೆ ಕಡುಚಳಕನು ತಾನೆನುತ್ತ ಪರರ ಅವಘಡಿಸದಿರೆಚ್ಚರಿಕೆ ಬಡಬಗ್ಗರ ಬಾಯ ಬಡಿದು ಪಾಪದಿ ಹೆಜ್ಜೆ ಇಡಬೇಡ ಎಚ್ಚರಿಕೆ || ದೊರೆ ಎನ್ನ ಬಲವು ಸುಸ್ಥಿರವೆಂದೆಲ್ಲರ ಹಗೆ ತರವಲ್ಲ ಎಚ್ಚರಿಕೆ ಉರಗನ ಮುತ್ತಿ ಕಟ್ಟಿರುವೆಯು ಕೊರೆದಂತ ತೆರನಪ್ಪುದೆಚ್ಚರಿಕೆ ಕರವ ಮುಗಿದು ಸಜ್ಜನರಿಗೆ ಶಿರ ಬಾಗಿ ಚರಿಸುತಿರೆಚ್ಚರಿಕೆ ಸಿರಿಸೊಡರಿಗೆ ಗುರುಹಿರಿಯರ ಅವಮಾನ ಬಿರುಗಾಳಿ ಎಚ್ಚರಿಕೆ || ಲೋಕಾಪವಾದಕೆ ಅಂಜಿ ನಡೆವುದು ವಿವೇಕ ಕೇಳೆಚ್ಚರಿಕೆ ನಾಕೇಶಗಾದರು ಬಿಡದಪಕೀರ್ತಿ ಪರಾಕು ಕೇಳೆಚ್ಚರಿಕೆ ಕಾಕು ಜನರ ಚಾಡಿ ನೀ ಕೇಳಿ ಕೋಪೋದ್ರೇಕ ಬೇಡೆಚ್ಚರಿಕೆ ಭೂಕಾಂತೆ ನಡುನಡುಗುವಳು ನಿಷ್ಠುರವಾದ ವಾಕು ಬೇಡೆಚ್ಚರಿಕೆ || ನಳಮಾಂಧಾತರೇನಾದರೆಂಬುದ ನೀ ತಿಳಿದು ನೋಡೆಚ್ಚರಿಕೆ ಅಳಿವುದು ಕಾಯವು ಉಳಿವುದೊಂದೇ ಕೀರ್ತಿ ಇಳೆಯೊಳಗೆಚ್ಚರಿಕೆ ಅಳಲಿಸಿ ಪರರನು ಗಳಿಸಿ ತಂದರ್ಥವು ಉಳಿಯದು ಎಚ್ಚರಿಕೆ ಉಳಿದಲ್ಪ ಕಾಲವು ಧರ್ಮದ ಹಾದಿಯ ಹಳಿಯಬೇಡೆಚ್ಚರಿಕೆ || ಪರಸತಿ ಧನ ಅಪಹರಿಸಲು ಸಿರಿ ಮೊಗದಿರುಹುವಳೆಚ್ಚರಿಕೆ ನೆರೆ ಛಿದ್ರಕುಂಭದ ನೀರಿನಂತಾಯುಷ್ಯ ಸರಿಯುತಿದೆಚ್ಚರಿಕೆ ಬರುವ ಹಾನಿ ವೃದ್ಧಿ ತನ್ನ ಕಾಲವ ಮೀರಲರಿಯದು ಎಚ್ಚರಿಕೆ ವರದ ಪುರಂದರವಿಠಲನ ಚರಣವ ಮರೆಯದಿರೆಚ್ಚರಿಕೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು