ಹಿಡಕೋ ಬಿಡಬೇಡ

ಹಿಡಕೋ ಬಿಡಬೇಡ

( ರಾಗ ಪೂರ್ವಿಕಲ್ಯಾಣಿ ಆದಿ ತಾಳ) ಹಿಡಕೋ ಬಿಡಬೇಡ ರಂಗನ ಪಾದ ||ಪ|| ಹಿಡಕೋ ಬಿಡಬೇಡ ಕೆಡುಕ ಕಾಳಿಂಗನ ಮಡುವಿನೊಳ್ ಧುಮುಕಿ ಕುಣಿದಾಡೊ ಕೃಷ್ಣನ ಪಾದ ||ಅ|| ಪುಟ್ಟಿದಾಗಲೆ ಇವ ದುರ್ಜನನೆನುತಲಿ ಅಟ್ಟಿದರಾಗಲೆ ತಾಯ್ತಂದೆಯರು ಮುಟ್ಟಿ ತನಗೆ ಮೊಲೆಗೊಟ್ಟಳ ಮಡುಹಿದ ದುಷ್ಟ ಕೃಷ್ಣನ ಹೋಗಬಿಟ್ಟರೆ ಸಿಕ್ಕನು || ಒಚ್ಹೊತ್ತನ್ನಕೆ ನಡೆದರೆ ಬಂಡಿಯ ನುಚ್ಚು ಮಾಡಿ ಕಾಲಲಿ ಒದ್ದ ಶಿಕ್ಷಿಸಲು ಜೋಡು ವೃಕ್ಷವ ತರಿದಿಟ್ಟ ರಚ್ಚೆಗಾರನೆಂದು ಬೆಚ್ಚದೆ ಜಗದೊಳು || ಇದ್ದಲ್ಲಿ ಇರನಿವ ಬುದ್ಧಿ ಎಳ್ಳಷ್ಟಿಲ್ಲ ಹದ್ದನೇರಿ ತಿರುಗಾಡುವನು ಮೆದ್ದೆಯಾತಕೆ ಮಣ್ಣ ತೆಗೆ ಬಾಯನೆಂದರೆ ಅದ್ಯಂತ ಜಗವನು ತೋರಿ ಅಂಜಿಸಿದನ || ಮಕ್ಕಳೊಳಗೆ ಪುಂಡ ಮನೆ ಮನೆಗಳ ಹೊಕ್ಕು ಸಕ್ಕರೆ ನೊರೆಹಾಲು ಸವಿಸವಿದು ಬೆಕ್ಕಿನ ಮೇಲಿಟ್ಟು ಬೆಣ್ಣೆಯ ತಾ ಮೆದ್ದು ಸಿಕ್ಕದೆ ಜಿಗಿದೋಡಿ ಪೋಗುವ ಕಳ್ಳನ || ಸಾರ ಹೃದಯನಲ್ಲ ಭಾರಿಯ ಗುಣವಿಲ್ಲ ಆರ ಮಾತನು ಇವ ಲೆಕ್ಕಿಸನು ನೀರೊಳಗಿಳಿದು ನಾರೇರ ಸೀರೆಯ ಕದ್ದು ಹಾರಿ ಹೊನ್ನೆಯ ಮರವೇರಿದ ಕೃಷ್ಣನ || ಕಾಳರಕ್ಕಸರೊಳು ಕದನ ಬೇಡೆಂದರೆ ಹೇಳಿದ ಹಾಗೆ ಕೇಳುವನಲ್ಲ ಕೂಡೆ ಆಡುವ ಮಕ್ಕಳಂಜಿಕೊಂಡರಾಗ ಗಾಳಿಯ ಮುರಿದಿಟ್ಟ ಗೈಯಾಳಿ ರಂಗನ || ಜೀರಿಗೆ ಬೆಲ್ಲವ ಪಿಡಿದಂಬಿಕೆಯನು ಸಾರಿ ಬಂದ ರುಕ್ಮಿಯನು ಕೊಂದು ಹೋರಬೇಡೆಂದರೆ ರುಕ್ಮನ ಹೆಡೆಗಯ್ಯ ತೇರಿಗೆ ಬಿಗಿದಂಥ ಚೋರ ಕೃಷ್ಣನ ಪಾದ || ಅಟ್ಟಿ ಹಾಯುವ ಏಳು ಗೂಳಿಗಳನ್ನು ಕಟ್ಟಿ ಸತ್ರಾಜಿತಗೆ ರತ್ನವಿತ್ತು ಅಷ್ಟ ಮಹಿಷಿಯರ ಅರ್ತಿಯ ಸಲಿಸಿದ ಸೃಷ್ಟಿಗೊಡೆಯ ಶ್ರೀ ಕೃಷ್ಣನ ಪಾದವ || ಇರುಳೊಳು ಹೆಂಗಳ ಕೂಡಿ ಆಡುತಲಿ ವರ ಯಮುನೆಯ ತೀರದಿ ನಿಂತ ಬರಿಮಾತಿಲ್ಹದಿನಾರು ಸಾವಿರ ತರಳೇರ ಮರುಳು ಮಾಡಿದ ಈ ಮದನ ಗೋಪಾಲನ || ಘಕ್ಕನೆ ಮಥುರೆಗೆ ಪೋಗಿ ಬರುವೆನೆಂದು ಅಕ್ಕಯ್ಯ ಗೋಪಿಗೆ ಪೇಳುತಲಿದ್ದ ಘಕ್ಕನೆ ಬಲರಾಮನೊಡಗೂಡಿ ರಥವೇರಿ ಸಿಕ್ಕದೆ ಹೋಗುವ ಅಕ್ರೂರವರದನ || ಆನೆಯ ಮಡುಹಿದ ಅಗಸನ ಕೆಡಹಿದ ತಾನರಸಗೆ ತಂದ ಹೂವನೆ ಮುಡಿದ ಮಾನಿನಿ ಕುಬುಜೆಗೊಲಿದು ಗಂಧ ಧರಿಸಿದ ಗಾನವಿನೋದಿ ಶ್ರೀಲಕುಮಿಯ ಅರಸನ || ಮಲ್ಲರನೆಲ್ಲರ ಚೆಲ್ಲಾಡಿ ಕೆಡಹಿದ ಬಿಲ್ಲು ಮುರಿದು ಮಾವನ ಮಡುಹಿ ನಿಲ್ಲದೆ ದೇವಕಿ ಸೆರೆಯನು ಬಿಡಿಸಿದ ಫುಲ್ಲಲೋಚನ ಶ್ರೀ ಕೃಷ್ಣನ ಪಾದವ || ನರಕುರಿಗಳನೆಲ್ಲ ಭರದಿ ರಕ್ಷಿಪುದಕ್ಕೆ ಪರಮಪಾವನ ನಾಮ ಇದು ಸಾಲದೆ ಕರಿ ಧ್ರುವ ಬಲಿ ಪಾಂಚಾಲಿಗೆ ವರವಿತ್ತ ಪುರಂದರವಿಠಲನ ಚರಣ ಕಮಲವನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು