ಮಾನಭಂಗವ ಮಾಡಿ ಮತ್ತೆ ಉಪಚಾರ
(ರಾಗ ಕಾಂಭೋಜ ಝಂಪೆ ತಾಳ )
ಮಾನಭಂಗವ ಮಾಡಿ ಮತ್ತೆ ಉಪಚಾರಗಳ-
ನೇನ ಮಾಡಿದರಲ್ಲಿ ಇರಬಾರದಯ್ಯ ||ಪ||
ಕುಂದುಗಳನೆತ್ತಿ ಕುಚೋದ್ಯ ಕುಮಂತ್ರಗಳ-
ನೊಂದೊಂದು ವರ್ಣಗಳನೆತ್ತಿ ಜರೆದು
ಮುಂದೆ ಭಂಗಿಸಿ ಹಿಂದೆ ಉಂಬಳಿಯ ನೀಡುವುದು
ಮುಂದಲೆಯ್ ಕೊಯ್ದು ಮುಡಿಗ್ಹುವ್ವು ಮುಡಿಸಿದಂತೆ ||
ನಗೆಗೇಡು ಮಾಡಿ ನಾಲ್ವರ ಮುಂದೆ ಮೊಗಗೆಡಿಸಿ
ಮಗುಳೆ ಬಾರೆಂದು ಮನ್ನಿಸಿ ಲಾಲಿಸಿ
ಮಿಗಿಲಾದ ವಸ್ತ್ರಗಳ ಭೂಷಣಂಗಳನೀಯೇ
ತೊಗಲ ಮೂಗ್ಹರಿದು ಚಿನ್ನದ ಮೂಗನಿತ್ತಂತೆ ||
ಅರ್ಥ ಹೋದರೆ ಪ್ರಾಣ, ಪ್ರಾಣ ಹೋದರೆ ಮಾನ
ವ್ಯರ್ಥವಾಗದ ಹಾಗೆ ಕಾಯಬೇಕು
ಕರ್ತ ಪುರಂದರವಿಠಲರಾಯನ
ಚಿತ್ತದಲಿ ನೆನೆನೆನೆದು ಸುಖಿಯಾಗಬೇಕು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments