ಹರಿಯೇ ಕುಣಿಯೆಂದು ಕುಣಿಸಿದರಯ್ಯ

ಹರಿಯೇ ಕುಣಿಯೆಂದು ಕುಣಿಸಿದರಯ್ಯ

( ರಾಗ ಮೋಹನ ಅಟತಾಳ) ಹರಿಯೇ ಕುಣಿಯೆಂದು ಕುಣಿಸಿದರಯ್ಯ ಹರಿಯೇ ಕುಣಿಯೆನುತ ||ಪ|| ನಡೆಯಡಿಯಿಲ್ಲದೆ ನಡೆವನ ಕುಡಿವನ ಪಡತಿಂಬನ ಒಡಹುಟ್ಟಿದನ ಒಡೆಯನ ಕಂದನ ವೈರಿಯ ಭಂಡಿಯ ಹೊಡೆದ ಮಹಾತ್ಮನ ಕುಣಿಸಿದರಯ್ಯ || ಒಣಗಿದ ಮರದಲಿ ಇಲ್ಲದ ಬಳ್ಳಿ ಬಣತಿಗೆ ಹುಟ್ಟಿದವನ ತಳ್ಳಿ ಕ್ಷಣವೊಂದರಿಯದೆ ಬಿಡದೆ ಆಹಾರಕೆ ಫಣಿ ಮೆಟ್ಟಿದವನ ಕುಣಿಸಿದರಯ್ಯ || ಮಾವನೊಡನೆ ಮನೆ ಮಾಡಿ ಗೋಕರ್ಣದಿ ತಾ ಉರಗನ ಮೇಲೊರಗಿದನ ಮೂವರ ಮೊಲೆ ಉಂಡು ಮೂರ್ಜಗವರಿಯದೆ ಮೂವರಣ್ಣನೆಂದು ಕುಣಿಸಿದರಯ್ಯ || ಲೋಕವ ತಾಳ್ದನ ಮನೆಯಲಿ ಪುಟ್ಟಿ ಶೋಕದ ನುಡಿಗಳ ಕದ್ದವನ ನಾಕರಿಸಲು ನಮಗೆ ಗೋಪರೂಪದಿಂದ ಆಕರಿಸಿದನ ಕುಣಿಸಿದರಯ್ಯ || ಗೋಕುಲದೊಳಗಿನ ಗೋಪಿಯರೆಲ್ಲರು ಏಕಾಂತದಿ ತಮ್ಮೊಳು ತಾವೆ ಶ್ರೀಕಾಂತ ನಮ್ಮ ಪುರಂದರವಿಠಲನ ಏಕಮೂರುತಿಯೆಂದು ಕುಣಿಸಿದರಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು