ಮಾಯವಾದಿ ಗಂಡನೊಲ್ಲೆನೆ
(ರಾಗ ಕಾಮವರ್ಧನಿ/ಪಂತುವರಾಳಿ ಅಟತಾಳ )
ಮಾಯವಾದಿ ಗಂಡನೊಲ್ಲೆನೆ, ಅವನ
ಮಾಯರಾಣಿ ಪೂಜೆ ಮಾಡಲಾರೆನಕ್ಕ ||ಪ ||
ಹೆಗಲ ಹಸಿಬೆಯೊಳಗಿಟ್ಟ ಮಡಿಯನುಟ್ಟು
ಗಗನದಿಂದಿಳಿದ ಗಂಗೆಯ ತೀರದಿ
ಅಗೆಯ ಮೃತ್ತಿಕೆಯ ಸರ್ವಾಂಗಕ್ಕೆ ಲೇಪಿಸಿ ಎ-
ನಗೆ ಮೈಯ ತೊಳೆಯಲೀಸನೆ ಭ್ರಷ್ಟ ಖೋಡಿ ||
ನಿಷ್ಠೆಯಿಂದಲಿ ಸಾಲಿಗ್ರಾಮಶಿಲೆಯ ಸಂ-
ಪುಷ್ಟದೊಳಿರಿಸಿ ಪೂಜಿಸು ಎಂದರೆ
ಭ್ರಷ್ಟರು ಕೊಂಬುವ ಮದ್ಯಪಾನವ ಮಾಡಿ
ಜೆಟ್ಟಿದೇವಿಯ ಪೂಜೆ ಮಾಡೆಂಬೋನಕ್ಕ ||
ಎಳೆ ತುಳಸಿ ಗಂಗೆ ಅರ್ಗ್ಯೋದಕದಿ ನಿ-
ರ್ಮಲವಾಗಿ ಪೂಜೆಯ ಮಾಡೆಂದರೆ
ಬಿಳಿ ನೀರ ಕುಡಿದು ಬತ್ತಲೆ ಬೇವು ಉಟ್ಟು
ಹುಳಿ ಮೂಲಂಗೀರುಳ್ಳಿ ತಿಂಬುವನೆ ಖೋಡಿ ||
ಹರಿದಿನದುಪವಾಸ ಇರುಳಲಿ ಜಾಗರ
ವರಭಕುತಿಯಲಿ ಆಚರಿಸೆಂದರೆ
ಹುರುಳಿಗುಗ್ಗುರಿ ಮುಕ್ಕಿ ಮೇಲೆ ಮಜ್ಜಿಗೆ ಕುಡಿದು
ಹಿರಿಯ ಹೆಬ್ಬುಲಿಯಂತೆ ನಿದ್ರಿಪ ಖೋಡಿ ||
ಸೃಷ್ಟಿಗಧಿಕನಾದ ವರದ ಶ್ರೀ ಪುರಂದರ-
ವಿಟ್ಠಲನ ಭಜನೆ ಮಾಡೆಂದರೆ
ಮುಷ್ಠಿ ಭಂಗಿಯ ತಿಂದು ಲಿಂಗಪೂಜೆಯ ಮಾಡಿ
ಇಷ್ಟ ಸಲ್ಲಿಸುತೇನೆಂದೆಳೆಯುವ ಖೋಡಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments