ಮಾನಹೀನನಿಗಭಿಮಾನವೇಕೆ
(ರಾಗ ಕಾಂಭೋಜ ಅಟತಾಳ )
ಮಾನಹೀನನಿಗಭಿಮಾನವೇಕೆ ||ಪ ||
ಜ್ಞಾನವಿಲ್ಲದವಂಗೆ ಗುರುಬೋಧೆಯೇಕೆ ||ಅ ||
ಕಾಡೊಳಗೆ ತಿರುಗುವಗೆ ಕನಕಭೂಷಣವೇಕೆ
ಓಡೊಳೊಗೆ ತಿಂಬುವಗೆ ಹರಿವಾಣವೇಕೆ
ಬೇಡಿದರೆ ಕೊಡದಿಹಗೆ ಕಡುಬಿಂಕತನವೇಕೆ
ಪಾಡಲರಿಯದವಂಗೆ ಪ್ರೌಢತನವೇಕೆ ||
ಅಂಬಲಿಯನುಂಬವಗೆ ಅಮೃತಾನ್ನವದೇಕೆ
ಕಂಬಳಿಯ ಹೊದೆವವಗೆ ಮಡಿಯೇತಕೆ
ಡೊಂಬಾಟಕಿಕ್ಕುವಗೆ ಗಾಂಭೀರ್ಯತನವೇಕೆ
ಹಂಬಲವ ಬಿಡದವಗೆ ಹರಿನಾಮವೇಕೆ ||
ಭೂಸುರರ ಕೊಲುವವಗೆ ಭೂರಿ ಧರ್ಮಗಳೇಕೆ
ಭಾಷೆಗೆಟ್ಟವಗೆ ನಂಬುಗೆಯೇತಕೆ
ಕ್ಲೇಶ ಒಡಲೊಳಗಿರಲು ತೀರ್ಥಯಾತ್ರೆಗಳೇಕೆ
ಆಸೆ ಬಿಡದಿದ್ದವಗೆ ಸನ್ಯಾಸವೇಕೆ ||
ಮಿತಿಮೀರಿ ನಡೆವವಗೆ ವ್ರತನೇಮಗಳು ಏಕೆ
ಸತಿಗೆ ಅಳುಕುವನ ಸಾಹಸವು ಏಕೆ
ಮತಿಶುದ್ಧಿಯಿಲ್ಲದ ಮಂತ್ರ ತಂತ್ರಗಳೇಕೆ
ಗತಿಯ ಚಿಂತಿಸದವನ ವಿಪ್ರತ್ವವೇಕೆ ||
ಸಾಮಾನ್ಯನಿಗೆ ಸಾರ್ವಭೌಮ ಪದವಿಯದೇಕೆ
ಪ್ರೇಮವಿಲ್ಲದ ಬಂಧುಜನವೇತಕೆ
ಸ್ವಾಮಿ ಶ್ರೀ ಪುರಂದರವಿಠಲನ ನೆನೆಯದಿಹ
ತಾಮಸಾಧಮನಿಗೆ ಕೈವಲ್ಯವೇಕೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments