ಮುಕ್ಕಾ ನಿನ್ನೊಡನೆ.
(ರಾಗ ಮಧ್ಯಮಾವತಿ. ಛಾಪು ತಾಳ )
ಮುಕ್ಕಾ ನಿನ್ನೊಡನೆ ನೋಡೊ ಮುಕ್ಕಾ ||ಪ ||
ಮುಕ್ಕಾ ನಿನ್ನೊಡನೆ ನೋಡೋ
ಸೊಕ್ಕಬೇಡವೆಲೊ ಮುಂದೆ
ಕಕ್ಕಸ ಪಡುವಿ ಕನ್ನಡಿ ಒಡೆದರೆ
ದಕ್ಕಿಸಿಕೊಂಬ್ಯಾ ಎಲ ಹುಚ್ಚು ಮೂಳ ||ಅ||
ಗುರುಹಿರಿಯರ ನಿಂದೆ ಮಾಡಿ
ತಾಯಿತಂದೆಗಳ ಚರಣಸೇವೆಗಳ ಹೋಗಾಡಿ
ಪರಿಪರಿ ನೀನು
ಬರಿದೆ ಆಲಸ್ಯವನ್ನೆ ಮಾಡಿ
ಎಲೊ ಎಲೊ ಖೋಡಿ
ಭರದಿಂದೆಳೆವರು ಕಾಲೆಮದೂತರು
ಕೊರಳ ಕೊಯ್ವರೊ ಎಲ ಹುಚ್ಚು ಮೂಳ ||
ನಿನ್ನ ದೇಹವ ನೋಡಿಕೊಂಬೆ
ನಿನಗೆ ನೀನೇ
ಚೆನ್ನಾಗಿದ್ದೇನೆಂತೆಂಬೆ
ಭ್ರಮಿಸಿ ಹುಚ್ಚು
ಕುನ್ನಿಯಂದದಿ ಹೊಗಳಿಕೊಂಬೆ
ಬಲು ಜಾಣನೆಂಬೆ
ಇನ್ನೇನು ಹೇಳಲಿ ಕಾಲೆಮದೂತರು
ಬೆನ್ನ ಕೊಯ್ದು ನರ ತೆಗೆದು ಎಳೆವರೊ ||
ಹೆಂಡಿರ ಕಂಡು ಹಲ್ಲ ಕಿರಿವೆ
ಹಾಕಿದ ಚೌರಿ
ಗೊಂಡೆ ರಾಕಟಿ ನೋಡಿ ಬೆರೆವೆ
ಅಲ್ಲಲ್ಲಿ ಕಂಡ
ಕಂಡ ವಿಷಯಕ್ಕೆ ಮನವಿಡುವೆ
ನಿನಗೇನು ಪರಿವೆ
ಚಂಡೆಮದೂತರು ಕಂಡೆಳಕೊಂಡು
ಹಿಂಡಿಹಿಪ್ಪೆ ಮಾಡಿಸುವರೊ ನಿನ್ನನು ||
ಬಾಲೇರ ಸುತರ ನಂಬಿದೆಲ್ಲೊ
ಮೂಗುತಿಗೊಪ್ಪು-
ವಾಲೆ ಮಾಡಿಸಿ ಇಟ್ಟೆಯಲ್ಲೊ
ಸಂಪತ್ತು ಸಿರಿ
ಬಾಳಿಗೆ ವ್ಯರ್ಥವಾಯಿತಲ್ಲೊ
ಕಡೆಗೆ ಬಲ್ಲೊ
ಸೀಳುವೆನೆನುತಲಿ ಕಾಲೆಮದೂತರು
ನಾಲಿಗೆ ಕೊಯ್ವರೊ ಎಲೆ ಹುಚ್ಚು ಮೂಳ ||
ನಿನ್ನೊಳು ನೀ ತಿಳಿದು ನೋಡೊ
ಗುರುಗಳ ಚರಣ-
ವನ್ನೆ ಚೆನ್ನಾಗಿ ಧ್ಯಾನ ಮಾಡೊ
ದುರಿತ ಮದಗ-
ಳನ್ನೆ ತರಿತರಿದೀಡಾಡೊ
ಭಕ್ತರ ಕೂಡೊ
ಚೆನ್ನ ಚಿದಾನಂದ ಸ್ವಾಮಿ ಪುರಂದರವಿಠ-
ಲನ್ನ ಪದಾಬ್ಜವ ನೆರೆನಂಬಿ ಬದುಕೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments