ಹಣ್ಣು ಕೊಂಬರು ಬನ್ನಿ
( ರಾಗ ಶಂಕರಾಭರಣ. ಅಟ ತಾಳ)
ಹಣ್ಣು ಕೊಂಬರು ಬನ್ನಿ, ಹರಿದಾಸರು
ಚಿಣ್ಣ ಬಾಲಕೃಷ್ಣನೆಂಬೊ ಹೆಸರಿನ ಹಣ್ಣು ||ಪ||
ಅಜನ ಪಡೆದ ಹಣ್ಣು ಗಜವ ಸಲಹಿದ ಹಣ್ಣು
ತ್ರಿಜಗಾದಿ ಗುರುವಿಗೆ ತೋರ್ದ ಹಣ್ಣು
ತ್ರಿಜಗವಂದಿತ ಪಾಲನೆಂಬೊ ಮಾವಿನ ಹಣ್ಣು
ಸುಜನ ಗಂಧಿಯರೆ ನೀವು ಕೊಳಬನ್ನಿರಮ್ಮಯ್ಯ ||
ಮುದ್ದು ಸುರಿವ ಹಣ್ಣು ಕ್ಷುದ್ರ ಹರಿಸುವ ಹಣ್ಣು
ಕದ್ದು ಬೆಣ್ಣೆಯ ಮೆದ್ದ ಕಳ್ಳ ಹಣ್ಣು
ಒದ್ದು ಮಾವನ ಕೊಂದು ಮಾತೆಯಪ್ಪಿದ ಹಣ್ಣು
ಮುದ್ದುಕೃಷ್ಣನೆಂಬೋ ಹಣ್ಣು ಕೊಳಬನ್ನಿರಮ್ಮಯ್ಯ ||
ಮುನ್ನೊಬ್ಬಜಾಮಿಳನ ಪಾಪ ಅಳಿದ ಹಣ್ಣು
ಕನ್ನೆಯರಭಿಮಾನ ಕಾಯ್ದ ಹಣ್ಣು
ಪನ್ನಗಶಾಯಿ ಪಾಲ್ಗಡಲೊಡೆಯನೆಂಬೊ ಹಣ್ಣು
ಚೆನ್ನ ಕೃಷ್ಣನೆಂಬೊ ಹಣ್ಣು ಕೊಳಬನ್ನಿರಮ್ಮಯ್ಯ ||
ಎರಡೆಂಟುಸಾವಿರ ಗೋಪೀರಾಳಿದ ಹಣ್ಣು
ಕರೆದರೆ ಕಂಭದಿಂದ ಓ ಎಂದ ಹಣ್ಣು
ಮರುಗುವ ಧ್ರುವಗೆ ಉನ್ನತ ಮಾಡಿದ ಹಣ್ಣು
ಪುರಂದರವಿಠಲನೆಂಬೊ ಹಣ್ಣು ಕೊಳಬನ್ನಿರಮ್ಮಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments