ಏತರ ಚೆಲುವ ರಂಗಯ್ಯ

ಏತರ ಚೆಲುವ ರಂಗಯ್ಯ

( ರಾಗ ಕೇದಾರಗೌಳ. ಛಾಪು ತಾಳ) ಏತರ ಚೆಲುವ ರಂಗಯ್ಯ (, ಇನ್ನೇತರ ಚೆಲುವ )||ಪ|| ಹರಿಯೆಂಬ ಮಾತಿಗೆ ಮರುಳಾದೆನಲ್ಲದೆ ||ಅ|| ದೇಶಕೋಶಗಳುಳ್ಳೊಡೆ ತಾ ಕ್ಷೀರದ ರಾಶಿಯೊಳಗೆ ಮನೆ ಕಟ್ಟುವನೆ ಹಾಸುವುದಕೆ ಹಾಸಿಗೆಯುಳ್ಳೊಡೆ ತಾ ಶೇಷನ ಬೆನ್ನಿಲಿ ಮಲಗುವನೆ ರಂಗ || ಬುದ್ಧಿಯ ಪೇಳುವ ಪಿತನುಳ್ಳೊಡೆ ಬೆಣ್ಣೆ ಕದ್ದು ಚೋರನೆಂದೆನಿಸುವನೆ ಬದ್ಧವಾಹನ ತನಗಿದ್ದರೆ ಹಾರುವ ಹದ್ದಿನ ಮೇಲೇರಿ ತಿರುಗುವನೆ ರಂಗ || ಹಡೆದ ತಾಯಿ ತನಗುಳ್ಳೊಡೆ ಗೋಪರ ಒಡಗೂಡಿ ತುರುವಿಂಡು ಕಾಯುವನೆ ಮಡದಿಯು ಉಳ್ಳೊಡೆ ಅಡವಿಯೊಳಾಡುವ ಹುಡುಗಿಯರ ಸಂಗ ಮಾಡುವನೆ ರಂಗ || ಸಂಗಡ ಉದಿಸಿದ ಅಣ್ಣನಿದ್ದರೆ ನರ- ಸಿಂಗನ ರೂಪವ ಧರಿಸುವನೆ ಅಂಗದ ಮೇಲಿನ ಆಸೆಯಿದ್ದೊಡೆ ಕಾಳಿಂಗನ ಮಡುವಿಲಿ ಧುಮುಕುವನೆ ರಂಗ || ಗತಿಯುಳ್ಳೊಡೆ ರಕ್ಷಃಪತಿಯೆಡೆಗೈದಿ ತಾ ಕ್ಷಿತಿಯ ದಾನವನು ಬೇಡುವನೆ ಮತಿವಂತ ಪುರಂದರವಿಠಲರಾಯನ ಪತಿತಪಾವನನೆಂದು ತುತಿಸಿದೆನಲ್ಲದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು