ಹಣ್ಣು ತಾ ಬೆಣ್ಣೆ ತಾ

ಹಣ್ಣು ತಾ ಬೆಣ್ಣೆ ತಾ

( ರಾಗ ಪಂತುವರಾಳಿ/ಕಾಮವರ್ಧಿನಿ. ಅಟ ತಾಳ) ಹಣ್ಣು ತಾ ಬೆಣ್ಣೆ ತಾ, ಗೋಪಮ್ಮ ಹಣ್ಣು ತಾ ಬೆಣ್ಣೆ ತಾ ||ಪ|| ಅಡವಿಯೊಳಗೆ ಅಸುರನ ಕೊಂದ ಕೈಗೆ ಮಡುವಿನೊಳಗೆ ಮಕರನ ಸೀಳ್ದ ಕೈಗೆ ಪೊಡವಿಯೊಳಗೆ ಚೆಂಡನಾಡಿದ ಕೈಗೆ ಕಡುಬೇಗದಿಂದಲಿ ಬೇಡಿದ ಕೈಗೆ || ಶಂಖಚಕ್ರಗಳನು ಪಿಡಿದಂಥ ಕೈಗೆ ಶಂಕೆಯಿಲ್ಲದೆ ಮಾವನ ಕೊಂದ ಕೈಗೆ ಬಿಂಕದಿಂದಲಿ ಕೊಳಲೂದುವ ಕೈಗೆ ಪಂಕಜ ಮುಖಿಯರ ಕುಣಿಸುವ ಕೈಗೆ || ದಿಟ್ಟತನದಿ ಬೆಟ್ಟವೆತ್ತಿದ ಕೈಗೆ ಸೃಷ್ಟಿಯ ದಾನವ ಬೇಡಿದ ಕೈಗೆ ದುಷ್ಟ ಭೂಪರನೆಲ್ಲ ಮಡುಹಿದ ಕೈಗೆ ಕೆಟ್ಟ ದಾನವರನ್ನು ಬಡಿದಂಥ ಕೈಗೆ || ಕಾಳಿಯ ಮಡುವನು ಕಲಕಿದ ಕೈಗೆ ಸೋಳ ಸಾಸಿರ ಗೋಪಿಯರಾಳಿದ ಕೈಗೆ ಮೇಳದ ಭಕ್ತರುದ್ಧರಿಸುವ ಕೈಗೆ ಏಳು ಗೂಳಿಯ ಗೆದ್ದ ಯದುಪತಿ ಕೈಗೆ || ಬಿಲ್ಲು ಬಾಣಗಳನ್ನು ಪಿಡಿದಂಥ ಕೈಗೆ ಮಲ್ಲರ ಸಾಧನ ಮಾಡಿದ ಕೈಗೆ ಎಲ್ಲ ದೇವರ ದೇವ ರಂಗನ ಕೈಗೆ ಬಲ್ಲಿದ ಪುರಂದರವಿಠಲನ ಕೈಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು