ಹಾಲು ಉಕ್ಕಿತೋ ರಂಗ ಹಾದಿಯ ಬಿಡೊ
( ರಾಗ ಪುನ್ನಾಗವರಾಳಿ. ಅಟ ತಾಳ)
ಹಾಲು ಉಕ್ಕಿತೋ ರಂಗ ಹಾದಿಯ ಬಿಡೊ ||ಪ||
ಹಾಲು ಬೇಕೇನೋ ನಿನಗೆ ಸೆರಗ ಬಿಡೊ ||ಅ||
ಕರವ ಪಿಡಿದರೆನ್ನ ನೌರಸಮುತ್ತಿನ
ಸರಗಳು ಹರಿದಾವು ಮುಟ್ಟದಿರೊ ರಂಗ
ಭರದಿ ಮುದ್ದು ಕೊಡುವರೇನೊ ಅತ್ತತ್ತ
ಸರಿಯೋ ನಮ್ಮವರು ಕಂಡಾರು ಕೃಷ್ಣ ||
ಪುರುಷನುಳ್ಳವಳು ನಾ ಪುರುಷರು ಕೇಳ್ಯಾರು
ಗುರುತು ಕಂಡರೆ ಕೊಲೆಯ ಕೊಂದಾರು
ಸರಸವಾಡಲು ಬೇಡ ಸಡಲೋವು ಮುಡಿಹುವ್ವು
ಸುರತ ಬೇಕಾದರೆ ಬರುವೆ ವನದೊಳಗೆ ||
ತಟ್ಟನೆ ತುಟಿಯ ಚುಂಬಿಸುವರೇನೊ ನೀನು
ರಟ್ಟು ಮಾಡದಿರೊ ರಾಜ್ಯದೊಳಗೆ
ಗುಟ್ಟಿನಿಂದಲಿ ತವಕದಿ ಎನ್ನ ಕೂಡೊ
ಅಟ್ಟಹಾಸದಿ ಮೆರೆವ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments