ಏನು ಮರುಳಾದ್ಯಮ್ಮ ಎಲೆ ಭಾರತಿ

ಏನು ಮರುಳಾದ್ಯಮ್ಮ ಎಲೆ ಭಾರತಿ

( ರಾಗ ಕಾಂಭೋಜ. ಝಂಪೆ ತಾಳ) ಏನು ಮರುಳಾದ್ಯಮ್ಮ ಎಲೆ ಭಾರತಿ ವಾನರನಿಕರದೊಳು ಶ್ರೇಷ್ಠನಾದವಗೆ ||ಪ|| ಕಣ್ಣಿಲ್ಲದವಳ ಗರ್ಭದಲಿ ಜನಿಸಿಬಂದು ನಿನ್ನ ತೊರೆದು ಬ್ರಹ್ಮಚಾರಿಯಾಗಿ ಹಣ್ಣಿಗಾಗಿ ಹೋಗಿ ವನವ ಕಿತ್ತೀಡಾಡಿ ಉಣ್ಣ ಭರದಲಿ ಎಂಜಲೆಲೆಯನೊಯ್ದವಗೆ || ಹುಟ್ಟಿದನು ಗುರುತಲ್ಪಗಮನಕುಲದಲ್ಲಿ ತಾ ನಟ್ಟಿರುಳೊಳೊಬ್ಬ ಅಸುರೆಯ ಕೂಡಿದ ಹೊಟ್ಟೆಗಿಲ್ಲದೆ ಹೋಗಿ ಭಿಕ್ಷದನ್ನವನುಂಡು ಅಟ್ಟು ಹಾಕುವನಾಗಿ ಸ್ವಕುಲ ಅಂತಕಗೆ || ಮಂಡೆ ಬೋಳಾಗಿ ಭೂಮಂಡಲವ ತಿರುಗಿದನು ಕಂಡವರು ಯಾರೆ ಈತನ ಗುಣಗಳ ಪುಂಡರೀಕಾಕ್ಷ ಶ್ರೀ ಪುರಂದರವಿಠಲನ ಕೊಂಡಾಡುತಲೆ ಬೋರೆಮರದ ಕೆಳಗಿದ್ದವಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು