ಗೋಪಿಯ ಭಾಗ್ಯವಿದು

ಗೋಪಿಯ ಭಾಗ್ಯವಿದು

( ರಾಗ ಬೆಹಾಗ್. ಆದಿ ತಾಳ) ಗೋಪಿಯ ಭಾಗ್ಯವಿದು ಶ್ರೀಪತಿ ತಾ ಶಿಶು ರೂಪಿನಲ್ಲಿರುವುದು ||ಪ|| ಕಡು ಮುದ್ದು ರಂಗನ ತೊಡೆಯ ಮೇಲೆತ್ತುತ ಜಡೆಯ ಹೆಣೆದು ಹೂ ಮುಡಿಸಿ ಬೇಗ ಬಿಡದೆ ಮುತ್ತಿನ ಚೆಂದರಳೆಲೆಯನು ಸಡಗರಿಂದಲಂಕರಿಸಿದಳು || ನಿತ್ಯನಿರ್ಮಲನಿಗೆ ನೀರನೆರೆದು ತಂ- ದೆತ್ತಿ ತೊಡೆಯೊಳಿಟ್ಟು ಮೊಲೆಯೂಡಿ ಮುತ್ತು ಕೊಟ್ಟು ಬಲು ವಿಧದಿಂದಾಡಿಸಿ ಅರ್ತಿಯಿಂದಲಿ ತಾ ತೂಗಿದಳು || ದೃಷ್ಟಿ ತಾಗೀತೆಂದಿಟ್ಟು ವಿಭೂತಿಯ ತಟ್ಟೆಯೊಳಾರತಿಗಳ ಬೆಳಗಿ ಥಟ್ಟನೆ ಉಪ್ಪು ಬೇವು ನಿವಾಸಿಳಿ ತೊಟ್ಟಿಲೊಳಿಟ್ಟು ತಾ ತೂಗಿದಳು || ಎಮ್ಮಯ್ಯ ರನ್ನನೆ ಸುಮ್ಮನಿರೋ ದೊಡ್ಡ ಗುಮ್ಮನು ಬರುವನು ಅಳಬೇಡ ಸುಮ್ಮನೆ ಇರು ನಿನಗಮ್ಮಿ ಕೊಡುವೆನೆಂದು ಬೊಮ್ಮನ ಪಿತನ ತಾ ತೂಗಿದಳು || ಮಾಧವ ಜೋ ಮಧುಸೂದನ ಜೋ ಜೋ ಯಾದವರಾಯ ಶ್ರೀರಂಗನೆ ಜೋ ಆದಿಮೂರುತಿ ನಮ್ಮ ಪುರಂದರವಿಠಲನ ಆದರದಿಂದ ತಾ ತೂಗಿದಳು ||
ದಾಸ ಸಾಹಿತ್ಯ ಪ್ರಕಾರ
ಬರೆದವರು