ಗೊಲ್ಲತೇರೆಲ್ಲ ಕೂಡಿ
( ರಾಗ ನಾದನಾಮಕ್ರಿಯ. ಏಕ ತಾಳ)
ಗೊಲ್ಲತೇರಲ್ಲ ಕೂಡಿ ಎನ್ನ ಮೇಲೆ
ಇಲ್ಲದ ಸುದ್ದಿ ಪುಟ್ಟಿಸಿ ||ಪ||
ಕಳ್ಳನೆಂದು ದೂರುತಾರೆ ಅಮ್ಮಯ್ಯಾ, ನೀ
ಕೇಳಬೇಕೆಂದಾಬಗೆಯ ||ಅ||
ಹರವಿಯ ಹಾಲು ಕುಡಿಯಲು, ಎನ್ನ ಹೊಟ್ಟೆ
ಕೆರೆಯೇನೆ ಕೇಳೆ ಅಮ್ಮಯ್ಯ
ಕರೆದು ಅಣ್ಣನ ಕೇಳು, ಉಂಟಾದರೆ
ಒರಳಿಗೆ ಕಟ್ಟು ಇನ್ನೊಮ್ಮೆ ||
ಮೀಸಲು ಬೆಣ್ಣೆಯ ಮೆದ್ದರೆ, ಅದು
ದೋಷವಲ್ಲವೆ ಎನಗೆ ಅಮ್ಮಯ್ಯ
ಆಸೆ ಮಾಡಿದರೆ ದೇವರು ಎನ್ನ
ಮೋಸ ಮಾಡಿ ಕಣ್ಣು ಮುಚ್ಚನೆ ||
ಉಂಗುರ ಕರದಿಂದ ಗೋಪಿ, ತನ್ನ
ಶೃಂಗಾರದ ಮಗನೆತ್ತಿ
ಮಂಗಳಮೂರುತಿ ಪುರಂದರವಿಠಲನ
ಹಿಂಗದೆ ಮುದ್ದಾಡಿ ಪಾಡುತಲಿದ್ದಳು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments