ಏನಣ್ಣ ನಿನಗೇನಣ್ಣ (ದಶಾವತಾರ)
( ರಾಗ ಆನಂದಭೈರವಿ. ಆದಿ ತಾಳ)
ಏನಣ್ಣ ನಿನಗೇನಣ್ಣ
ಕಣ್ಣೇಕಣ್ಣ ಮುಚ್ಚವೊಲ್ಲ್ಯಣ್ಣ
ಏನಣ್ಣ ನಿನ್ನ ಗೋಳಣ್ಣ
ಕಣ್ಣಿಂದ ನೋಡವೊಲ್ಲ್ಯಣ್ಣ ||೧||
ಗೂನಣ್ಣ ಬಲು ಗೂನಣ್ಣ
ಗಿರಿಯ ಹ್ಯಾಂಗೆ ನೀ ಹೊತ್ಯಣ್ಣ
ಹೀನ ಅಸುರರ ಹ್ಯಾಂಗಣ್ಣ
ಮೋಸವ ನೀ ಮಾಡಿದ್ಯಣ್ಣ ||೨||
ಹಲ್ಲಣ್ಣ ಕೋರೆ ಹಲ್ಲಣ್ಣ
ಭೂಮಿಯ ಹ್ಯಾಂಗೆ ನೀ ಹೊತ್ಯಣ್ಣ
ಒಳ್ಳೆ ಒಳ್ಳೆ ಭಕುತರನ್ನ
ಮೆಚ್ಚೆ ನೀನು ಬಂದ್ಯಣ್ಣ ||೩||
ಪೋರನ ಮೊರೆ ಕೇಳಿಯಣ್ಣ
ಕಂಭದಿಂದ ಬಂದ್ಯಣ್ಣ
ಘೋರವಾದ ನೋಟವ ನೋಡಿ
ಅವನಪ್ಪನ ನೀ ಬಡಿದ್ಯಣ್ಣ ||೪||
ಪುಟ್ಟು ಪುಟ್ಟು ಹೆಜ್ಜೆಣ್ಣ
ಇಟ್ಟು ನೀಯದರನ್ನ
ಕೊಟ್ಟ ಮಣ್ಣಿನ ಒಂದೆ ಬಾರಿ ಅಳೆದ್ಯಣ್ಣ
ನೀ ಅಳೆದ್ಯಣ್ಣ ||೫||
ರಾಮಣ್ಣ ಬಡಿಬ್ಯಾಡಣ್ಣ
ರಾಯನೊಬ್ಬನಿಲ್ಲಣ್ಣ
ನಮ್ಮ ರಾಮಣ್ಣ ಹುಟ್ಟಬೇಕಣ್ಣ
ರಾವಣನ ಬಡಿಬೇಕಣ್ಣ ||೬||
ಎಲ್ಯಣ್ಣ ನೀ ಹುಟ್ಟಿದ್ಯಣ್ಣ
ಎಲ್ಯಣ್ಣ ನೀ ಬೆಳೆದ್ಯಣ್ಣ
ಕೊಲ್ಲ ಬಂದು ಹೆಣ್ಣಿನ ಏನಣ್ಣ
ನೀ ಮಾಡಿದ್ಯಣ್ಣ ||೭||
ಮಾನವ ನೀ ಕಳೆದ್ಯಣ್ಣ
ಮಾನಿನಿಯರ ಪಿಡಿದ್ಯಣ್ಣ
ಮಾನವರ ಪಾಲಿವುದಕ್ಕೆ
ಕುದುರೆಯ ನೀ ಏರಿದ್ಯಣ್ಣ ||೮||
ವ್ಯರ್ಥವಾಗಿ ಐದಲಣ್ಣ
ವರ್ಷಗಳು ಪೋಯಿತಣ್ಣ
ಮರೆದು ಹೋಗದೆ ಕೇಳಣ್ಣ
ನಿನ್ನ ಧ್ಯಾನವೆನಗೆ ನೀಡಣ್ಣ ||೯||
ಇಲ್ಲಣ್ಣ ಕೇಳ ಇಲ್ಲಣ್ಣ
ನೀನಿಲ್ಲದೆ ಒಂದಿಲ್ಲಣ್ಣ
ಎಲ್ಲಾವು ನೀ ಬಲ್ಯಣ್ಣ
ನಿನ್ನ ಬಲ್ಲವರಿಲ್ಲಣ್ಣ ||೧೦||
ಮೊದಲಣ್ಣ ನೀ ಮೊದಲಣ್ಣ
ಕೊನೆಯಲಿರುವೆ ನೀನಣ್ಣ
ಮೊದಲು ಕೊನೆಗಳು ಇಲ್ಲಣ್ಣ
ತಂದೆ ಪುರಂದರವಿಠಲಣ್ಣ ||೧೧||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments