ದುಗ್ಗಾಣಿ ಎಂಬುದು ದುರ್ಜನ ಸಂಗ
(ರಾಗ ನಾದನಾಮಕ್ರಿಯೆ ಅಟತಾಳ)
ದುಗ್ಗಾಣಿ ಎಂಬುದು ದುರ್ಜನ ಸಂಗ ||ಪ ||
ದುಗ್ಗಾಣಿ ಬಲು ಕೆಟ್ಟದಣ್ಣ ||ಅ||
ಆಚಾರ ಹೇಳೋದು ದುಗ್ಗಾಣಿ, ಬಹು
ನೀಚರ ಮಾಡೋದು ದುಗ್ಗಾಣಿ
ನಾಚಿಕೆಯಿಲ್ಲದೆ ಮನೆಮನೆ ತಿರುಗಿಸಿ
ಛೀ ಛೀ ಎನಿಸೋದು ದುಗ್ಗಾಣಿಯಣ್ಣ ||
ನೆಂಟತನ ಹೇಳೋದು ದುಗ್ಗಾಣಿ, ಬಹು
ನೆಂಟರನೊಲಿಸೋದು ದುಗ್ಗಾಣಿ
ಒಂಟೆ ಹಾಂಗೆ ಮೋರೆ ಮೇಲಕ್ಕೆ ಸೆಳಕೊಂಡು
ಕುಂಟನೆನಿಸುವುದು ದುಗ್ಗಾಣಿಯಣ್ಣ ||
ಮಾನವಾಗಿರಿಸೋದು ದುಗ್ಗಾಣಿ, ಮಾನ
ಹಸಗೇಡಿಸೋದು ದುಗ್ಗಾಣಿ, ಬಹು
ಮಾನನಿಧಿ ಶ್ರೀಪುರಂದರವಿಠಲನ
ಕಾಣಿಸದಿರುವುದು ದುಗ್ಗಾಣಿಯಣ್ಣ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments