ದೇವಕಿಯುದರಸಂಜಾತನೆ ತ್ರುವ್ವಿ

ದೇವಕಿಯುದರಸಂಜಾತನೆ ತ್ರುವ್ವಿ

( ರಾಗ ಜೋಗುಳ. ಆಟ ತಾಳ) ದೇವಕಿಯುದರ ಸಂಜಾತನೆ ತ್ರುವ್ವಿ ಕಾಮನ ಪಿತ ಕಮಲಾಕ್ಷನೆ ತ್ರುವ್ವಿ ಶ್ರೀ ವೈಭವ ಸಚ್ಚಿದಾನಂದ ತ್ರುವ್ವಿ ಭಾವಕಿ ಗೋಪಿಯ ಕಂದನೆ ತ್ರುವ್ವಿ || ಮಧುರೆಯೊಳುದಿಸಿದ ಮಹಿಮನೆ ಜೋ ಜೋ ಯದುಕುಲ ತಿಲಕ ಯಾದವರಾಯ ಜೋ ಜೋ ಮಧುಕೈಟಭ ಮುರ ಮರ್ದನ ಜೋ ಜೋ ಚದುರನೆನಿಸಿ ತುರುಗಳ ಕಾಯ್ದೆ ಜೋ ಜೋ || ಗೋಕುಲ ಪಾಲಕ ಗೋವಿಂದ ತ್ರುವ್ವಿ ಶ್ರೀಕುಚಕುಂಕುಮಾಂಕಿತ ಕೃಷ್ಣ ತ್ರುವ್ವಿ ಪಾಕಶಾಸನ ಮುಖ್ಯ ಸುರ ವಂದ್ಯ ತ್ರುವ್ವಿ ಲೋಕವೀರೇಳ ಪೆತ್ತಾತನೆ ತ್ರುವ್ವಿ || ಶ್ರುತಿಚೋರಸಂಹಾರಕ ದೇವ ಜೋ ಜೋ ಜತನದಿ ಸುರರಿಗಮೃತವಿತ್ತೆ ಜೋ ಜೋ ಸತಿಯ ಕದ್ದೊಯ್ದನ ಸೀಳ್ದೆ ನೀ ಜೋ ಜೋ ಮತಿಯುತ ಬಾಲಕನತಿರಕ್ಷ ಜೋ ಜೋ || ಕ್ಷಿತಿಯ ಈರಡಿ ಮಾಡ್ದೆ ವಾಮನ ತ್ರುವ್ವಿ ಯತಿವಂಶಜನನ ಭಾರ್ಗವರೂಪ ತ್ರುವ್ವಿ ಕ್ರತುವ ರಕ್ಷಕ ಕಾಕುತ್ಸ್ಥನೆ ತ್ರುವ್ವಿ ರತಿಪತಿಪಿತ ಸುರನುತ ಕೃಷ್ಣ ತ್ರುವ್ವಿ || ಗೋಪಿಕಾನಂದ ಮುಕುಂದನೆ ಜೋ ಜೋ ಭೂಪರೊಳ್ ಕಾದಿ ಬಳಲಿದನೆ ಜೋ ಜೋ ಶ್ರೀ ಪುರುಷೋತ್ತಮ ನರಸಿಂಹ ಜೋ ಜೋ ಅಪಾರ ಮಹಿಮಾರ್ಣವ ತ್ರುವ್ವಿ ಜೋ ಜೋ || ಮಣ್ಣೊಳಗಾಡಿ ನೀ ಬಂದೆಯ ತ್ರುವ್ವಿ ಬೆಣ್ಣೆಯ ಬೇಡೆ ಬೈದರೆ ಕಂದ ತ್ರುವ್ವಿ ಕಣ್ಣ ದೃಷ್ಟಿಗೆ ಕರಗದ ಕಂದ ತ್ರುವ್ವಿ ಚಿಣ್ಣ ಸುಮ್ಮನೆಯಿರು ಶ್ರೀ ಕೃಷ್ಣ ತ್ರುವ್ವಿ || ತಾರಕಸತಿವ್ರತಹಾರಕ ಜೋ ಜೋ ವಾರಣಹಯವೇರಿ ಮೆರೆದನೆ ಜೋ ಜೋ ಸಾರಿದವರ ಸಂತೈಸುವೆ ಜೋ ಜೋ ಶ್ರೀರಮಾಕಾಂತ ಶ್ರೀಕೃಷ್ಣನೆ ಜೋ ಜೋ || ಶರಣಾಗತ ವಜ್ರಪಂಜರ ತ್ರುವ್ವಿ ಕರುಣಾಕರ ಕಮಲಾಕ್ಷನೆ ತ್ರುವ್ವಿ ಧರಣೀಧರಶಾಯಿ ಶ್ರೀವರ ತ್ರುವ್ವಿ ವರದ ಶ್ರೀ ಪುರಂದರ ವಿಠಲನೆ ತ್ರುವ್ವಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು