ಎನ್ನ ಜನ್ಮ ಸಫಲವಾಯಿತು

ಎನ್ನ ಜನ್ಮ ಸಫಲವಾಯಿತು

( ರಾಗ ಆನಂದಭೈರವಿ. ಅಟ ತಾಳ) ಎನ್ನ ಜನ್ಮ ಸಫಲವಾಯಿತು ಎನ್ನನುದ್ಧರಿಸಲಾಗದೆ ||ಪ|| ಎನ್ನ ಜನ್ಮ ಸಫಲವಾಯಿತನ್ಯರನು ಬಯಸಲೇಕೆ ತನ್ನ ತಾನೊಲಿದ ವ್ಯಾಸಮುನಿರಾಯನ ಕೈಯ ಸೇರಿರೋ ||ಅ|| ಸಿರಿಯರಸನ ಕರುಣದಾಳು ಸರಸಿಜಸಂಭವನ ಪಿತನ ಸುರರೊಡೆಯನ ಸಕಲ ವೇದವರಸುವಂಥ ಹರಿಯ ಪರದೇವತೆ ಇದೇಇದೇಯೆಂದು ಕರಕಮಲದೊಳಿಟ್ಟು ತೋರುವ ಪರಮಹಂಸ ವ್ಯಾಸರಾಯರ ಚರಣವ ನೆರೆನಂಬಿರೆಲ್ಲರು || ಜ್ಞಾನ ಭಕುತಿ ವೈರಾಗ್ಯವ ನಿಧಾನದಿ ನಮಗಿತ್ತು ಪೊರೆವ ದಾನವಾರಿಯ ಗುಣಗಣವ ಬಲ್ಲ ಮೌನಿಗಳ ವರಶಿರೋರನ್ನನ ತಾನೆ ದೇವರೆಂಬ ಅಸುರರ ಕಾನನವ ತರಿದೊಟ್ಟುವ ಆನಂದ ತೀರ್ಥರ ಪಟ್ಟದಾನೆ ವ್ಯಾಸರಾಯರಿರಲು || ಹಿಂದೆ ಸಾವಿರ ಜಿಹ್ವೆಯಲಿ ಮುಕುಂದನಹಿರಾಜ ಪೊಗಳು- ವಂದದಿಂದ ಹರಿಯ ಗುಣಗಳಿಂದು ತುತಿಸಿ ಸುಜನರ ಕೃಪೆ- ಯಿಂದ ಪೊರೆವುತ್ತಭಿನವಪುರಂದರವಿಠಲನ್ನ ಜಗಕೆ ತಂದು ತೋರುವ ವೈಷ್ಣವಕುಮುದೇಂದು ವ್ಯಾಸರಾಯರಿರಲು ||
ದಾಸ ಸಾಹಿತ್ಯ ಪ್ರಕಾರ
ಬರೆದವರು