ದಾಸ ಶೇಷಾದ್ರಿವಾಸ
( ರಾಗ ತೋಡಿ. ಅಟ ತಾಳ)
ದಾಸ ಶೇಷಾದ್ರಿವಾಸ ತಿಮ್ಮಪ್ಪನ, ದಾಸರನ ಕರೆದೊಯ್ದು
ಸಾಸಿರನಾಮ ವಿಲಾಸ ಮೂರ್ತಿಯ , ಲೇಸಾಗಿ ತೋರೆನಗೆ ||ಪ||
ಬೆರಳು ಇಲ್ಲದ ಕೈಯೊಳುಂಡು ಜೀವಿಸುವನ, ಶಿರದಲಂಧದ ದೇವನ
ಉರುವ ಶಾಪಕೆ ತಾನು ಕಿರಿದಾಗಿ ಇರುವನ, ಶರದೊಳು ಧರಿಸಿದವನ
ಕೊರಳ ಮಾಲೆಯ ಪೆಸರೊಪ್ಪಿದ ಗಿರಿಯೊಳು, ಸ್ಥಿರವಾಗಿ ನೆಲಸಿಪ್ಪನ
ಕರುಣ ವಾರಿಧಿ ವೆಂಕಟೇಶನ ಚರಣವ, ಕರೆದೊಯ್ದು ತೋರೆನಗೆ ||
ವಾರಿಧಿಯೊಳುದಿಸಿದ ನಾರಿಯ ಮಧ್ಯದಿ, ಏರಿಯೆ ಕುಳಿತವನ
ವಾರಿಜ ವದನದಿ ತೋರಿದ ಸಾರದ, ಮೂರೊಂದು ಪೆಸರವನ
ಮೇರುವಿನಗ್ರದಿ ಊರಿದ ಚರಣವ, ಸಾರಿದವರ ಜೀವನ
ಊರಿಗೆ ಕರದೊಯ್ದು ಶ್ರೀ ವೇಂಕಟೇಶ ಪ-ದಾರವಿಂದವನೆನಗೆ ||
ಸೋತ ಮಾನಿನಿಯೊಳು ಜಾತವಾಗಿಯೆ ಮೇಲೆ, ಮಾತೆಯ ಸಲಹಿದವನ
ನೀತಿ ತಪ್ಪಿಯ ನಡೆವಾತ ಭಕ್ಷಕರನ್ನು, ಘಾತಿಸಿ ತರಿದವನ
ನೂತನವಾಗಿಹ ನಾಮ ಶೈಲದ ಮೇಲೆ, ಕಾತರದೊಳು ನಿಂತವನ
ಪಾತಕನಾಶನ ಶ್ರೀವೇಂಕಟೇಶನ, ರೀತಿಯ ತೋರೆನಗೆ ||
ಋಷಿಯ ಮಕ್ಕಳಿಗೆಲ್ಲ ಹಸಿವಿಗೆ ಗುರಿಯಾಗಿ, ವಶ ತಪ್ಪಿ ನಡೆವವನ
ಬಸಿರೊಳಗುದಿಸಿಯೆ ಬಿಸಿಯನೆಲ್ಲವ ತಿಂದು, ಎಸೆವಂಥ ಮಹವೀರನ
ಪೆಸರೊಳಗೊಪ್ಪಿದ ಹಸನಾದ ಗಿರಿಯೊಳು, ಕುಶಲದಿ ನಿಂತವನ
ನಸುಮುದ್ದು ಶ್ರೀವೆಂಕಟೇಶನ ಚರಣದ, ಬಿಸರುಹ ತೋರೆನಗೆ ||
ಪಾದ ನಾಲ್ಕನು ಮೇದಿನಿಯೊಳಗೂರಿಯೆ, ಆದರಿಸುತ ಬಪ್ಪ ಮೇ-
ಲಾದ ಪಾದವ ನಾಲ್ಕು ಅಂತರಿಕ್ಷದ ಮೇಲೆ, ಕಾದುಕೊಳ್ಳುತಲಿಪ್ಪನ
ಆದಿಯ ನಾಮಕ್ಕೆ ಅದ್ರಿಯನೊಡಗೊಂಡು ಹಾದಿಯನಿತ್ತವನ
ಸಾಧಿಸಿ ನಿಂತಿಹ ಶ್ರೀ ವೆಂಕಟೇಶನ, ಪಾದವ ತೋರೆನಗೆ ||
ಆದಿ ನಾರಾಯಣನೆಂಬ ಪರ್ವತವನ್ನು, ಭೇದಿಸಿ ನಿಂತವನ
ಸಾಧಿಸಿ ಮುಂದಣ ವೆಂಕಟಾದ್ರಿಯ ಮೇಲೆ ಪಾದವನೂರಿದನ
ಮೇದಿನಿಯೊಳಗುಳ್ಳ ಸಾಧು ಭಕ್ತರನೆಲ್ಲ, ಕಾದುಕೊಳ್ಳುತಲಿಪ್ಪ
ವಿನೋದ ಮೂರುತಿಯಾದ ಶ್ರೀ ವೆಂಕಟೇಶನ ಪಾದವ ತೋರೆನಗೆ ||
ಅತ್ತೆಯ ಒರಸೆಯ ಮತ್ತೆ ಅಳಿಯಗಾದ, ಪುತ್ರಿಯ ತಂದವನ
ಉತ್ತಮವಾಗಿಹ ಮಗಳ ಸನ್ನಿಧಿಯಲ್ಲಿ, ನಿತ್ಯದೊಳಿರುತಿಪ್ಪನ
ಬತ್ತಲೆಯಾಗಿಹ ಸತಿಯಳ ಸತ್ಯಕ್ಕೆ, ಪುತ್ರನೆಂದೆನಿಸಿದನ
ಹತ್ತಿರ ಕರೆದೊಯ್ಯು ಪುರಂದರವಿಠಲನ, ನಿತ್ಯದಿ ತೋರೆನಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments