ಚಿತ್ತ ಶುದ್ಧಿಯಿಲ್ಲದ ಮನುಜ
( ರಾಗ ಮುಖಾರಿ. ಝಂಪೆ ತಾಳ)
ಚಿತ್ತ ಶುದ್ಧಿಯಿಲ್ಲದ ಮನುಜ ಜ್ಞಾನಿಯೇ ||ಪ||
ಪಾಪ, ಹೊತ್ತು ಕಳೆಯದಂಥ ನರ ಮನುಜನೆ ||ಅ||
ಬಂಧನದೊಳಿಹ ವ್ಯಾಘ್ರ ಅದು ಬಹು ತಪಸ್ವಿಯೇ
ಸಿಂಧುವಿನೊಳಿಹ ನೊರೆ ಸಿತಕರಣವೇ
ಅಂಧಕನು ಕಣ್ಣು ಮುಚ್ಚಲು ಯೋಗಸಾಧನವೇ
ಮಂದಮತಿ ಸುಮ್ಮನಿರಲದು ಮೌನವೆ ||
ಶ್ವಾನ ಬೂದಿಯೊಳಿರಲು ಶಿವಭಕ್ತನೆನಬಹುದೆ
ಕಾನನದೊಳಿಹ ಕಾಗೆ ವನವಾಸಿಯೇ
ಗಾಣ ತಿರುಗಲೆತ್ತು ದೇಶಯಾತ್ರೆಯೆನಬಹುದೆ
ಮೀನದಾಸೆಯ ಬಕನ ಸ್ಥಿತಿ ಧ್ಯಾನವೇ ||
ತೋಳ ಅಡವಿಯ ತಿರುಗಲು ಅದು ದಿಗಂಬರನೆ
ಗಾಳಿಯುಂಬುವ ಭುಜಗ ಉಪವಾಸಿಯೇ
ಆಲದ ಮರಕೆ ಜಡೆಯಿರಲು ಅದು ತಪಸ್ವಿಯೆ
ಕಾಲದಲ್ಲಿಹ ಗೂಗೆ ಹಿರಿಯಾಗಬಹುದೆ ||
ಮಾರಿ ಮನೆಯೊಳಗಿರಲು ಮತ್ತೆ ಸಹಕಾರಿಯೇ
ಊರ ಒಳಗಿನ ಕಳ್ಳ ಅವ ನೆಂಟನೇ
ಜಾರೆಯೆನಿಸುವಳು ಕುಲವನಿತೆಯೇ ಸಂ-
ಸಾರ ಮಗ್ನನಾದವ ಜ್ಞಾನಿಯೇ ||
ಮಂಡೂಕ ಕೂಗಲದು ಮಂತ್ರವೆಂದೆನಬಹುದೆ
ಗುಂಡು ನೀರೊಳಗಿರಲು ಅದು ಸ್ನಾನವೇ
ಪುಂಡರೀಕಾಕ್ಷ ಸಿರಿ ಪುರಂದರವಿಠಲನ್ನ
ಕಂಡು ಭಜಿಸದವ ಪಾಪಿ ಅವ ಮನುಜನೇ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments