ಎಲ್ಲಿರುವನೋ ರಂಗನೆಂಬ ಸಂಶಯ ಬೇಡ
( ರಾಗ ಕಲ್ಯಾಣಿ. ಅಟ ತಾಳ)
ಎಲ್ಲಿರುವನೋ ರಂಗನೆಂಬ ಸಂಶಯ ಬೇಡ
ಎಲ್ಲಿ ಭಕ್ತರು ಕರೆದರಲ್ಲೆ ಒದಗುವನು ||ಪ||
ತರಳ ಪ್ರಹ್ಲಾದ ಶ್ರೀಹರಿ ವಿಶ್ವಮಯನೆಂದು
ಬರೆದೋದಲವನ ಪಿತ ಕೋಪದಿಂದ
ಸ್ಥಿರವಾದಡಿ ಕಂಭದೊಳು ತೋರು ತೋರೆನಲು
ಭರದಿ ಬರಲದಗೆ ವೈಕುಂಠ ನೆರೆ ಮನೆಯೆ ||
ಪಾಪ ಕರ್ಮವ ಮಾಡಿದಜಮಿಳನ ಯಮಭಟರು
ಕೋಪದಿಂದೆಳೆಯುತಿರೆ ಭೀತಿಯಿಂದ
ತಾ ಪುತ್ರನನು ಕರೆಯ ಕೇಳಿ ರಕ್ಷಿಸೆ ಶ್ವೇತ
ದ್ವೀಪವೀ ಧರೆಗತಿ ಸಮೀಪದಲ್ಲಿಹುದೆ ||
ಕರಿರಾಜನು ನೆಗಳು ನುಂಗುತಿರೆ ಭಯದಿಂದ
ಮೊರೆಯಿಡಲು ಕೇಳಿ ಅತಿ ತ್ವರಿತದಿಂದ
ಕರುಣದಲಿ ಬಂಧನವ ಬಿಡಿಸಲಾಗಜರಾಜ
ನಿರುವ ಸರಸಿಗೆ ಅನಂತಾಸನವು ಮುಮ್ಮನೆಯೆ ||
ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆ
ತರುಣಿ ಹಾ ಕೃಷ್ಣ ಎಂದೊದರೆ ಕೇಳಿ
ಭರದಿಂದ ಅಕ್ಷಯಾಂಬರವಿತ್ತ ಹಸ್ತಿನಾ-
ಪುರಿಗು ದ್ವಾರಾವತಿಗು ಕೂಗಳತೆಯೆ ||
ಅಣು ಮಹತ್ತುಗಳಲ್ಲಿ ಪರಿಪೂರ್ಣೆಂದೆನಿಸಿ
ಗಣನೆಯಿಲ್ಲದ ಮಹಾಮಹಿಮನೆನಿಪ
ಘನಕೃಪಾನಿಧಿ ನಮ್ಮ ಪುರಂದರ ವಿಟ್ಠಲನು
ನೆನೆದವರ ಮನದೆಲ್ಲ ಇಹನೆಂಬ ಬಿರುದಿರಲು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments