ಬುದ್ಧಿ ಹೇಳೆ ಗೋಪಿ

ಬುದ್ಧಿ ಹೇಳೆ ಗೋಪಿ

( ರಾಗ ಪುನ್ನಾಗವರಾಳಿ. ಅಟ ತಾಳ)

 

ಬುದ್ಧಿ ಹೇಳೆ ಗೋಪಿ ನಿನ್ನ ಮುದ್ದು ಕಂದಗೆ ||ಪ||

ಸದ್ದು ಮಾಡದ್ಹಾಗೆ ಬಂದು ಮುದ್ದನಿಟ್ಟು ಪೋದನಮ್ಮ ||ಅ||

 

ಗಂಧ ಕಸ್ತೂರಿ ಪುನುಗು ಚಂದದಿಂದ ಪೂಸಿಕೊಂಡು

ಮಂದಹಾಸದಿಂದ ಬಂದ ಇಂದಿರೇಶನು

ಸಿಂಧುಶಯನ ತಾ ಬಂದು ಮಂದಿರದೊಳಗೆ ಪೊಕ್ಕು

ಸಂದುಗೊಂದುಗಳ ಹುಡುಕಿ ಸರಸವಾಡಿ ಪೋದನಮ್ಮ ||

 

ಚಪ್ಪರಮಂಚದ ಮೇಲೆ ತಪ್ಪಿ ನಾ ಮಲಗಿರೆ

ಸಪ್ಪಳವಾಗದ್ಹಾಗೆ ಬಂದು ಅಪ್ಪಿಕೊಂಡನೆ

ಕುಪ್ಪಸದಲಿ ಕೈಯನಿಕ್ಕಿ ಕಕ್ಕಸ ಕುಚಗಳ ಪಿಡಿದು

ತಪ್ಪು ಕಾರ್ಯ ಮಾಡಿ ಅಧರ ಚಪ್ಪರಿಸಿ ಪೋದನಮ್ಮ ||

 

ಸುಳ್ಳು ಅಲ್ಲವೆ ನಮ್ಮ ಮಾತು ವಲ್ಲಭೆ ಕೇಳೆ ಗೋಪ್ಯಮ್ಮ

ಮೆಲ್ಲ ಮೆಲ್ಲನೆ ಬಂದು ತಾ ಗಲ್ಲಕೆ ಮುದ್ದನಿಟ್ಟು

ನಲ್ಲಳೆ ಬಾ ಎಂದು ಕರೆದು ಸೊಲ್ಲ ಸೊಲ್ಲ ಮಾತನಾಡಿ

ವಲ್ಲಭ ಶ್ರೀ ಪುರಂದರವಿಠಲ ಬುಲ್ಲಿ ತೋರಿ ಪೋದ ||

ದಾಸ ಸಾಹಿತ್ಯ ಪ್ರಕಾರ
ಬರೆದವರು