ರಾಮ ರಾಮೆನ್ನಿರೋ...
ರಾಗ ಸೌರಾಷ್ಟ್ರ/ಅಟ್ಟ ತಾಳ
ರಾಮ ರಾಮೆನ್ನಿರೋ ನರಜನ್ಮ ಸ್ಥಿರವಲ್ಲ ರಾಮ ರಾಮ || ಪಲ್ಲವಿ ||
ಇಂಥ ಕೋಮಲಾಂಗನ ನಾಮ ಆ ವೇಳೆಗೊದಗದು ರಾಮ ರಾಮ || ಅನುಪಲ್ಲವಿ ||
ಆರಿಗೆ ಆರಿಲ್ಲ ತನಗೆ ತಾನಲ್ಲದೆ ರಾಮ ರಾಮ ತನ್ನ
ನಾರಿಯು ಮೊದಲಾದವರು ಸರಿ ಬಾರರು ರಾಮ ರಾಮ || ೧ ||
ಓರಂತೆ ಸಾಕಿದ ಸುತರು ತನ್ನವರಲ್ಲ ರಾಮ ರಾಮ
ಧಾರುಣಿ ಪಶು ಧಾನ್ಯ ಧನವು ಹಿಂದುಳಿವುವೋ ರಾಮ ರಾಮ || ೨ ||
ಕೆಟ್ಟ ಸಂಸಾರದಿ ಎಷ್ಟಕ್ಕು ಸುಖವಿಲ್ಲ ರಾಮ ರಾಮ
ಸೃಷ್ಟಿಯೊಳ್ ಪುರಂದರವಿಠಲನ ಮರೆಯದೆ ರಾಮ ರಾಮ || ೩ ||
~~~~ * ~~~~
ಆರಿಗೆ ಆರಿಲ್ಲ -- 'ಉಧರೇದಾತ್ಮನಾತ್ಮಾನಂ' ಎಂಬ ಸ್ಮೃತಿ ವಾಕ್ಯದ ಛಾಯೆ.
ಓರಂತೆ ಸಾಕಿದ -- 'ಓರ್ ಅಂತೆ'. ಒಬ್ಬನೇ ಮಗನೆಂಬಂತೆ ಪ್ರೀತಿಯಿಂದ ಸಾಕಿದ.
ಧಾರುಣಿ -- ಭೂಮಿ.
[ಪುರಂದರ ಸಾಹಿತ್ಯ ದರ್ಶನ - ಸಂಪುಟ ೧]
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments