ಆಡಿಸು ನೀ ಬಾರೋ ಹರಿಗೋಲ್ಹಾಕಿಸು

ಆಡಿಸು ನೀ ಬಾರೋ ಹರಿಗೋಲ್ಹಾಕಿಸು

( ರಾಗ ಧನಶ್ರೀ. ಆದಿ ತಾಳ) ಆಡಿಸು ನೀ ಬಾರೋ ಹರಿಗೋಲ್ಹಾಕಿಸು ನೀ ಬಾರೊ ||ಪ|| ಮಿತ್ರೇರಾಡಿದ ಮಾತನು ಕೇಳಿ ಶ್ರೀ ಕೃಷ್ಣನು ತಾ ಬಂದ ||ಅ|| ಹುಟ್ಟನೆ ತೆಗೆದು ಹೆಗಲಲ್ಲಿಟ್ಟು ಥಟ್ಟನೆ ಕೈ ಕೊಟ್ಟ ನೀರು ತುಂಬಿತು ನಾವೆಯೊಳಗೆ ಕೇಳೋ ಅಂಬಿಗನೆ ತಡಮಾಡದಲೆ ದಡದಲಿ ಸೇರಿಸು ನಡೆ ನಡೆ ಅಂಬಿಗನೆ ಏನು ಮಾಡಲಿ ಮಾನಿನಿರನ್ನೆ ಸೋತುವು ಕೈಯೆಲ್ಲ || ನೀರು ಒಳಗೆ ಸೆಳೆದು ಸೆಳೆದು ಸೋತಿತು ಮೈಯೆಲ್ಲ ಇನ್ನಾದರು ನೀವು ನೀರೊಳಗೆ ಕರಗಳ ಹಾಕಿ ಸಾಗಿಸಿರೆ ನಿಮ್ಮ ದೇವರಿಗೆಲ್ಲ ಹರಕೆ ಹರಸಿ ಬೇಡಿ ಕೊಳ್ಳಿರೆ ಒಡವೆ ವಸ್ತುವು ಬೇಡಿದ್ದು ಕೊಡುವೇವು ಹಿಡಿ ಹಿಡಿ ಅಂಬಿಗನೆ|| ನಗ ನಾಣ್ಯಗಳು ಯಾರಿಗೆ ಬೇಕೆ ನಗೆಯು ಬರುತದೆನಗೆ ನಾರಿ ನೀವೆಲ್ಲರು ತೊಟ್ಟ ಕಂಚುಕ ಬಿಚ್ಚಿ ನೀರೊಳಗ್ಹಾಕಿರೆ ಏತಕೆ ಬಂದೇವು ಈತನ ಸಂಗತಿ ಎಂದೆಂದಿಗು ಸಾಕು ದಾಸಿಯರೆಲ್ಲರು ನಿಮ್ಮವರೆಂದೂ ಕೇಳೊ ಗುಣಸಿಂಧು|| ಬಾ ಬಾರೆನುತಲಿ ಬಣ್ಣಿಸಿ ನಿಮ್ಮನು ಕರೆದವರು ಯಾರೆ ನಾರಿ ನಿಮ್ಮ ಪ್ರಾಣ ಉಳಿಯ ಬೇಕಾದರೆ ಸೀರೆ ಬಿಚ್ಚಿ ತಾರೆ ಕೊಟ್ಟರು ಕೈಯಲ್ಲಿ ನಾಚುತ ಕಣ್ಣನು ಮುಚ್ಚಿಕೊಂಡರು ಬೇಗ || ಹೆಣ್ಣುಗಳೇ ನೀವು ಮುಚ್ಚಲಿಬೇಡಿ ಕಣ್ಣಗಳಾ ಕೇಳಿ ಸಣ್ಣ ಕುಪ್ಪಸವಿದು ಚಿದ್ರಕೆ ಸಾಲದು ಕಣ್ಣು ಬಿಟ್ಟು ನೋಡಿರೆಂದ ನಾರಿಯರೆಲ್ಲರು ನಾಚುತ ಶಿರಗಳ ಬಾಗಿ ಕುಳಿತರವರು ಉದಧಿಶಯನ ಸಿರಿ ಪುರಂದರವಿಠಲ ವಸ್ತ್ರವ ಕೊಟ್ಟನು ಕರುಣದಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು