ಬಡವ ನಿನಗೊಬ್ಬರ ಗೊಡವೆ ಯಾತಕ್ಕೋ
( ರಾಗ ಮಧ್ಯಮಾವತಿ. ಅಟ ತಾಳ)
ಬಡವ ನಿನಗೊಬ್ಬರ ಗೊಡವೆ ಯಾತಕ್ಕೋ
ಒಡವೆ ವಸ್ತು ತಾಯಿ ತಂದೆ
ಒಡೆಯ ಕೃಷ್ಣನಿರಲಿಕ್ಕಾಗಿ ||ಪ||
ಮಡದಿ ಮಕ್ಕಳು ಎದುರಿಸಿದರೆ
ಕಡೆಗಣಿಸಿ ಕೈದುಡುಕೀ ಕಂಡ್ಯ
ಅಡಿಕೆಹೋಳಿಗೆ ಹೋದ ಮಾನ
ಆನೆ ಕೊಟ್ಟರೆ ಬಾರದೋ ||
ಒಪ್ಪತ್ತು ಭಿಕ್ಷವ ಬೇಡು
ಒಬ್ಬರಿಗೊಂದಿಷ್ಟು ನೀಡು
ಅಪ್ಪನಾದಚ್ಯುತನ ಪಾಡು
ಆನಂದದಿಂದೋಲಾಡು ||
ಭೋಗ್ಯ(ಯೋಗಕೆ)ಕರ್ಮಂಗಳು ಎಲ್ಲ
ನೀಗಿ ಕಳೆದು ಪೋಗುವ ತನಕ
ಮಾಗಿ ಕೋಕಿಲಯೆಂದದಿ ನೀ
ಮುದುರಿಕೊಂಡಿರು ಒದರಬೇಡ ||
ಓದು ತರ್ಕವೆಲ್ಲ ಭ್ರಾಂತಿ
ಆದಿದೇವನ ಕಾನದನಕ
ಬೂದಿ ಮುಚ್ಚಿದ ಕೆಂಡದಂತೆ
ಬುದ್ಧೀಲಿರು ನಾ ಹೇಳೇನಂತೆ ||
ದೊರೆತನವಿದ್ದೇನು ಹೆಚ್ಚು
ಸಿರಿತನವಿದ್ದೇನು ಮೆಚ್ಚು
ವರದಪುರಂದರವಿಠಲನ್ನ
ನರದೇಹದಲಿ ನೋಡದನಕ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments