ಎಚ್ಚರದಲಿ ನಡೆ
( ರಾಗ ಆನಂದಭೈರವಿ. ಅಟ ತಾಳ)
ಎಚ್ಚರದಲಿ ನಡೆ ಮನವೆ ನಡೆ ಮನವೆ ||ಪ||
ಮುದ್ದು ಅಚ್ಯುತನ ದಾಸರ ಒಡನಾಡು ಮನವೆ ||ಅ||
ಅನ್ನ ದಾನವ ಮಾಡುವುದಿಲ್ಲಿ, ಮೃ-
ಷ್ಟಾನ್ನವ ತಂದು ಮುಂದಿಡುವರು ಅಲ್ಲಿ
ಅನ್ಯಾಯ ನುಡಿವುದು ಇಲ್ಲಿ, ನಿನ್ನ
ಬೆನ್ನ ಚರ್ಮವ ಸೀಳಿ ತಿನಿಸುವರಲ್ಲಿ ||
ಆಲಯ ಧರ್ಮವು ಇಲ್ಲಿ, ವಿ-
ಶಾಲ ವೈಕುಂಠದೊಳಿಡುವರು ಅಲ್ಲಿ
ಆಲಯ ಮುರಿಯುವುದಿಲ್ಲಿ, ನಿನ್ನ
ಶೂಲದ ಮರವನೇರಿಸಿ ಕೊಲ್ಲುವರಲ್ಲಿ ||
ಚಾಡಿಯ ನುದಿಯುವುದಿಲ್ಲಿ, ನೀ-
ನಾಡಿದ ನಾಲಿಗೆ ಸೀಳುವರಲ್ಲಿ
ಬೇಡಬಂದರೆ ಬೈಯುವುದಿಲ್ಲಿ ನಿ-
ನ್ನೋಡಾಟ ಕಾಲ ಕತ್ತರಿಸುವರಲ್ಲಿ ||
ಯಾಚಕರನು ಬೈಯುವುದಿಲ್ಲಿ, ನಿನ್ನ
ನಾಚಿಗೆ ತೆಗೆದು ನಾಲಿಗೆ ಸೀಳುವರಲ್ಲಿ
ಯಾಚಕರ ಪೂಜೆ ಇಲ್ಲಿ, ನಿನಗೆ
ಸ್ವೋಚಿತ ಮಾರ್ಗವನೀಯುವರಲ್ಲಿ ||
ತಂದೆ ತಾಯಿಗಳ ಬಯ್ಯುವುದಿಲ್ಲಿ, ಹಲ್ಲು (ಹುಲ್ಲು?)
ಝಂಡೆಯ ಕಟ್ಟಿ ಸುಡಿಸುವರಲ್ಲಿ
ತಂದೆ ತಾಯ್ಗಳ ಪೂಜೆ ಇಲ್ಲಿ, ದೇ-
ವೇಂದ್ರನ ಸಭೆಯ ತೋರುವರು ಮುಂದಲ್ಲಿ ||
ಅತ್ತೆ ಮಾವನ ಬಯ್ಯುವುದಲ್ಲಿ, ನಿನ್ನ
ಕತ್ತು ಕರಗಸದಲ್ಲಿ ಕೊಯ್ಯುವರಲ್ಲಿ
ಅತ್ತೆ ಮಾವನ ಪೂಜೆ ಇಲ್ಲಿ, ಅವಳ
ಉತ್ತಮ ಪತಿವ್ರತೆಯೆಂಬುವರಲ್ಲಿ ||
ಧರ್ಮವ ಮಾಡುವುದಿಲ್ಲಿ, ನಿನಗೆ ಸು-
ಧರ್ಮ ಸಭೆಯ ತೋರುವರು ಮುಂದಲ್ಲಿ
ಕರ್ಮಮೋಚನೆಗಳು ಇಲ್ಲಿ, ನಿನಗೆ
ನಿರ್ಮಿಸಿಹನು ಕ್ರಿಮಿ ತಿನ್ನುವುದಲ್ಲಿ ||
ವಂಚನೆ ಮಾಡುವುದಿಲ್ಲಿ, ಕಾದ
ಹಂಚಿನ ಪುಡಿಯನು ತಿನಿಸುವರಲ್ಲಿ
ಪಂಚಾಮೃತವ ನೀಡುವುದಿಲ್ಲಿ, ನಿನಗೆ
ಕಂಚುಕಾಳಂದಿಯ ಪಿಡಿದಿಹರಿಲ್ಲಿ ||
ಗಂಡನ ಭಕ್ತಿಯು ಇಲ್ಲಿ, ನಮ್ಮ
ಪುಂಡರೀಕಾಕ್ಷನು ಒಲಿಯುವನಲ್ಲಿ
ಗಂಡನ ನಿಂದಿಪುದಿಲ್ಲಿ, ನಿನ್ನ
ಖಂಡ ಖಂಡವ ಕತ್ತರಿಸುವರಲ್ಲಿ ||
ಮದ್ದಿಟ್ಟು ಕೊಲ್ಲುವುದಿಲ್ಲಿ, ಒ-
ದ್ದೊದ್ದು ಹದ್ದು ಕಾಗೆಗ್ಹಾಕುವರಲ್ಲಿ
ಕ್ಷುದ್ರ ಬುದ್ದಿಯ ಮಾಡುವುದಿಲ್ಲಿ, ದೊಡ್ಡ
ಗುದ್ದಲಿ ಕಾಸಿ ಬೆನ್ನೊಳು ಎಳೆವರಲ್ಲಿ ||
ಹೆಣ್ಣು ಹೊನ್ನನು ಬಯಸುವುದಿಲ್ಲಿ, ನಿನ್ನ
ಕಣ್ಣಿಗೆ ಸುಣ್ಣವ ತುಂಬುವರಲ್ಲಿ
ಕನ್ಯಾ ದಾನವ ಮಾಡುವುದಿಲ್ಲಿ, ನಮ್ಮ
ಪುರಂದರವಿಠಲ ಒಲಿಯುವನಲ್ಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments