ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ
ರಾಗ ನವರೋಜು /ಆದಿ ತಾಳ
ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ || ಪಲ್ಲವಿ ||
ಕಣಕ ಕುಟ್ಟೋ ಅಲ್ಲಿಗೆ ಹೋಗಿ
ಹಣಿಕಿ ಇಣಿಕಿ ನೋಡುವಿರಿ
ಕಣಕ ಕುಟ್ಟೋ ಒನಕೆಲಿ ಬಡಿದರೆ
ಕುಂಯಿ ಕುಂಯಿ ರಾಗವ ಹಾಡುವಿರಿ || ೧ ||
ಹುಗ್ಗಿ ಮಾಡೋ ಅಲ್ಲಿಗೆ ಹೋಗಿ
ತಗ್ಗಿ ಬಗ್ಗಿ ನೋಡುವಿರಿ
ಹುಗ್ಗಿ ಮಾಡೋ ಸೌಟಲಿ ಬಡಿದರೆ
ಕುಂಯಿ ಕುಂಯಿ ರಾಗವ ಮಾಡುವಿರಿ || ೨ ||
ಹಿರೇ ಬೀದಿಯಲಿ ಓಡುವಿರಿ
ಕರೇ ಬೂದಿಯಲಿ ಹೊರಳುವಿರಿ
ಪುರಂದರ ವಿಠ್ಠಲರಾಯನ ಈ ಪರಿ
ಮರೆತು ಸದಾ ನೀವ್ ಚರಿಸುವಿರಿ || ೩ ||
~~~~ * ~~~~
[ನಿತ್ಯ ಯಾತ್ರೆಯ ಒಂದು ಸಂದರ್ಭದಲ್ಲಿ ಅನ್ನಕ್ಕಾಗಿ ಅಲೆದಾಡುವ ಬೀದಿ ನಾಯಿಗಳನ್ನು ನೋಡಿ ಈ ಪದ ಹೊರಹೊಮ್ಮಿತೆಂದು ತೋರುತ್ತದೆ. ಸಾಮಾನ್ಯವಾಗಿ ಮನುಷ್ಯರಿಗೂ ಈ ನಾಯಿಗಳಿಗೂ ಇರುವ ಸಾದೃಶ್ಯ ಅವರಿಗೆ ತಟಕ್ಕನೆ ತೋರಿಕೊಂಡಿತು.
ಆದ್ದರಿಂದ ಈ ನಾಯಿಗಳನ್ನು ಮಾರಿಮಿಕವಾಗಿ 'ನಾಯಕರು' ಎಂದು ಕರೆದಿದ್ದಾರೆ. ಅಧಿಕಾರವನ್ನು ಮೆರೆಸುತ್ತ, ಅನ್ನಕ್ಕಾಗಿ ಹಂಬಲಿಸುವ ನಾಯಕರೂ ದಿಟವಾಗಿ ನಾಯಿಗಳೇ ಎಂದು ದಾಸರ ಆಶಯ]
~~~~ * ~~~~
ಕಣಕ ಕುಟ್ಟೋ - ಕಣಕ (ಕನುಕ) ಎಂದರೆ ಹಿಟ್ಟು, ಸಾಮಾನ್ಯವಾಗಿ ಗೋಧಿಯ ಹಿಟ್ಟು
ಹಣುಕಿ - ಕಳ್ಳತನದಲ್ಲಿ ನೋಡುವುದು
ಹಿರೇ ಬೀದಿ - ದೊಡ್ಡ ಹಾದಿ, ರಾಜ ಮಾರ್ಗ
[ಪುರಂದರ ಸಾಹಿತ್ಯ ದರ್ಶನ - ಸಂಪುಟ ೧]
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments