ಭಂಗಾರವಿಡಬಾರೆ
( ರಾಗ ಧನಶ್ರೀ. ಆದಿ ತಾಳ)
ಭಂಗಾರವಿಡಬಾರೆ, ನಿನಗೊಪ್ಪುವ ಭಂಗಾರವಿಡಬಾರೆ ||ಪ||
ರಂಗನಾಥನ ದಿವ್ಯ ಮಂಗಳ ನಾಮವೆಂಬ ಭಂಗಾರವಿಡಬಾರೆ ||ಅ||
ಮುತ್ತೈದೆತನವೆಂಬ ಮುಖದಲಿ ಕುಂಕುಮದ
ಕಸ್ತೂರಿಯ ಬೊಟ್ಟನಿಡೆ
ನಿನ್ನ ಫಣೆಗೆ ಕಸ್ತೂರಿಯ ಬೊಟ್ಟನಿಡೆ
ಹೆತ್ತವರ ಕುಲಕೆ ಕುಂದು ಬಾರದ ಹಾಗೆ
ಮುತ್ತಿನ ಮೂಗುತಿಯನಿಡೆ
ಕರ್ತೃ ಪತಿಯ ಮಾತು ಮೀರಬಾರದು ಎಂಬ
ಮುತ್ತಿನೋಲೆ ಕೊಪ್ಪನಿಡೆ
ನಿನ್ನ ಕಿವಿಗೆ ಮುತ್ತಿನೋಲೆ ಕೊಪ್ಪನಿಡೆ
ಹತ್ತು ಮಂದಿಯ ಕೈಲಿ ಹೌದೌದೆನಿಸಿಕೊಂಬ
ಮಸ್ತಕ ಮುಕುಟವಿಡೆ ||
ಅರೆಗಳಿಗೆ ಪತಿಯ ಅಗಲಬಾರದು ಎಂಬ
ಅಚ್ಚ ಮಂಗಳಸೂತ್ರ ಕಟ್ಟೆ
ನಿನ್ನ ಕೊರಳಿಗೆ ಅಚ್ಚ ಮಂಗಳಸೂತ್ರ ಕಟ್ಟೆ
ಪರಪುರುಷನು ನಿನ್ನ ಪಡೆದ ತಂದೆಯೆಂಬ
ಪದಕಸರವ ಹಾಕೆ
ಕರೆದೊಬ್ಬರಿಗೆ ಅನ್ನವಿಕ್ಕುವೆನೆಂತೆಂಬ
ಹರಡಿ ಕಂಕಣವನಿಡೆ
ನಿನ್ನ ಕೈಗೆ ಹರಡಿ ಕಂಕಣವನಿಡೆ
ನೆರೆಹೊರೆಯವರೆಲ್ಲ ಸರಿಸರಿಯೆಂಬಂಥ
ಬಿರುದಿನೊಡ್ಯಾಣವಿಡೆ ||
ಮಾನ ಹೊರಗೆ ಬಿಚ್ಚೆನೆಂಬ ಕಂಭಾವತಿಯ
ನೇಮದ ಮಡಿಯನುಡೆ
ನಿನ್ನ ಮೈಗೆ ನೇಮದ ಮಡಿಯನುಡೆ
ಹೀನಗುಣವ ಬಿಟ್ಟು ಹಿತದಲ್ಲಿದ್ದೇನೆಂಬ
ಹೆಚ್ಚಿನ ಕುಪ್ಪುಸ ತೊಡೆ
ಜ್ಞಾನನಿಧಿಗಳಾದ ಗುರುಗಳ ಪಾದ-
ಕ್ಕಾನತಳಾಗಿ ಬಾಳೆ
ಮೌನಿಗಳೊಡೆಯ ಶ್ರೀ ಪುರಂದರವಿಠಲನ
ಪ್ರೇಮ ಸೆರಗಿಲಿ ಕಟ್ಟೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments