ಆರು ಬದುಕಿದರೇನು
( ರಾಗ ಕಾಂಭೋಜ ಅಟ ತಾಳ)
ಆರು ಬದುಕಿದರೇನು ಆರು ಬಾಳಿದರೇನು
ಪೂರ್ವ ಜನ್ಮದ ಕರ್ಮ ವಿಧಿ ತೀರದನಕ ||ಪ||
ಪತಿ ಭಕುತಿಯಿಲ್ಲದಿಹ ಸತಿಯಿದ್ದು ಫಲವೇನು
ಮತಿಯಿಲ್ಲದವಗೆ ಬೋಧಿಸಿದರೇನು
ಪತಿಯಿಲ್ಲದವಳಿಗೆ ಬಹು ಭೋಗವಿದ್ದರೇನು
ಮತಿ ಹೀನನಾದಂಥ ಮಗನ ಗೊಡವೇನು
ಜ್ಞಾನವಿಲ್ಲದವ ನಿತ್ಯ ಸ್ನಾನ ಮಾಡಿ ಫಲವೇನು
ದಾನ ಧರ್ಮವಿಲ್ಲದವನ ದಯವಾದರೇನು
ಮಾನಾಭಿಮಾನಗಳ ಮರೆದವನ ಸಂಗವೇನು
ದೀನನಾದವನಿಗೆ ದೈರ್ಯವಿದ್ದರೇನು
ಕಣ್ಣಿಲ್ಲದಗೆ ಚಂದ್ರನುದಯದಾ ಭ್ರಮೆಯೇನು
ಹೆಣ್ಣಿಲ್ಲದಿಹ ಅಷ್ಟ ಭೋಗಂಗಳೇನು
ಬಣ್ಣ ಬಂಗಾರವನು ಬಚ್ಚಿಟ್ಟು ಫಲವೇನು
ಅಣ್ಣ ತಮ್ಮಂದಿರನು ಅಗಲಿ ಸುಖವೇನು
ಗುರು ದೈವವರಿಯದವ ಹಿರಿಯನಾದರೇನು
ಜರಿದು ಕೆಟ್ಟಾಡುವನ ಸರಸವೇನು
ಮರೆಹೊಕ್ಕವರ ಕಾಯದವನ ದೊರೆತನವೇನು
ಪರರಿಗುಪಕರಿಸದವ ಬಾಳಿ ಫಲವೇನು
ವೇದಗಳನೋದಿ ತಾ ವಾದಿಸಲು ಫಲವೇನು
ಭೇದವೆಣಿಸುತಿಹನ ನೆಂಟತನವೇನು
ಮೋದದಿಂದ್ಹರಿಗರ್ಪಿಸದ ಕವಿತೆಯಿಂದೇನು
ಓದಿಸದೆ ಕೆಡಿಸುವ ತಂದೆಯಿದ್ದೇನು
ಭಾವ ಶುದ್ದಿಯಿಲ್ಲದವನ ದೇವತಾರ್ಚನೆಯೇನು
ಆವ ವರಗಳ ಕೊಡದ ದೇವರೇನು
ದೇವ ಶ್ರೀ ಪುರಂದರ ವಿಠಲನ್ನ ಚರಣವನು
ಆವಾಗ ನೆನೆಯದಿಹ ಜಿಹ್ವೆಯಂದೇನು
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments