ಆರು ಬದುಕಿದರಯ್ಯ ಹರಿ ನಿನ್ನ ನಂಬಿ
( ರಾಗ ಕಾಂಭೋಜ ಝಂಪೆ ತಾಳ)
ಆರು ಬದುಕಿದರಯ್ಯ ಹರಿ ನಿನ್ನ ನಂಬಿ ||ಪ||
ತೋರು ಈ ಜಗದೊಳಗೆ ಒಬ್ಬರನು ಕಾಣೆ ||ಅ||
ಕರ ಪತ್ರದಿಂದ ತಾಮ್ರ ಧ್ವಜನ ತಂದೆಯ
ಕೊರಳ ಕೊಯಿಸಿದೆ ನೀನು ಕುಂದಿಲ್ಲದೆ
ಮರುಳನಂದದಿ ಪೋಗಿ ಭೃಗು ಮುನಿಯ ಕಣ್ಣೊಡೆದೆ
ಅರಿತು ತ್ರಿಪುರಾಸುರನ ಹೆಂಡಿರನು ಬೆರೆದೆ
ಕಲಹ ಬಾರದ ಹಾಗೆ ಕರ್ಣನನು ನೀ ಕೊಂದೆ
ಸುಲಭದಲಿ ಕೌರವರ ಮನೆಯ ಮುರಿದೆ
ನೆಲನ ಬೇಡುತ ಪೋಗಿ ಬಲಿಯ ತನುವನು ತುಳಿದೆ
ಮೊಲೆಯನುಣಿಸಲು ಬಂದ ಪೂತನಿಯ ಕೊಂದೆ
ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆ
ಗರುಡ ವಾಹನ ನಿನ್ನ ಚರಿಯವರಿಯೆ
ದೊರೆ ಪುರಂದರ ವಿಠಲ ನಿನ್ನನ್ನು ನಂಬಿದರೆ
ತಿರುಪೆಯು ಹುಟ್ಟಲೊಲ್ಲದು ಕೇಳೋ ಹರಿಯೆ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments