ಅಕ್ಕ ನಂದಗೋಪನ ಅರಮನೆಯೊಳಗೊಬ್ಬ
( ರಾಗ ಮೋಹನ ಆದಿ ತಾಳ)
ಅಕ್ಕ ನಂದಗೋಪನ ಅರಮನೆಯೊಳಗೊಬ್ಬ, ಅಕ್ರೂರ ಬಂದನಂತೆ
ಹೊಕ್ಕು ಬಳಸುವಳಲ್ಲ ಹುಸಿಯನಾಡುವಳಲ್ಲ,
ಅಕ್ಕೋ ಬಾಗಿಲ ಮುಂದೀಗ ರಥವ ಕಂಡೆ ||ಪ||
ಮಧುರಾಪಟ್ಟಣವಂತೆ ಮಾವ ಕರೆಸಿದನಂತೆ
ನದಿಯ ದಾಟಲು ಬೇಕಂತೆ
ಬದಲು ಮಾತಿಲ್ಲವಂತೆ ಏನೆಂಬೆ ಏಣಾಕ್ಷಿ
ಉದಯದಿ ಪಯಣವಂತೆ ಹೇ ಕಾಂತೆ
ಮಲ್ಲರ ಕೂಟವಂತೆ, ಮತ್ತೆ ಕಾಳಗವಂತೆ
ಬಲ್ಲಿದ ಗಜಗಳಂತೆ
ಬಿಲ್ಲಹಬ್ಬಗಳಂತೆ , ಬೀದಿ ಶೃಂಗಾರವಂತೆ
ಅಲ್ಲೆ ತಾಯಿತಂದೆರ ಕಾಲಿಗೆ ನಿಗಡವಂತೆ
ಅಲ್ಲೆ ಹುಟ್ಟಿದನಂತೆ, ಅರಸನಳಿಯನಂತೆ ,
ಇಲ್ಲಿಗೆ ಬಂದನಂತೆ
ಎಲ್ಲ ಕಪಟವಂತೆ, ಎಲ್ಲೂ ಹೀಗಿಲ್ಲವಂತೆ
ನಿಲ್ಲದೆ ಯಶೋದೆ ಕಣ್ಣಿಗೆ ನೀರಂತೆ
ಮತ್ತೆ ಪಾಂಡವರಂತೆ, ಮೋಹದ ಸೋದರ
ಅತ್ತೆಯ ಮಕ್ಕಳಂತೆ
ಸುತ್ತು ಶತ್ರುಗಳಂತೆ, ಸಕಲ ಕಾರ್ಯಗಳಂತೆ
ಚಿತ್ತಜನಯ್ಯನ ಚಿತ್ತವೆರಡಾದವಂತೆ
ತಾಳಲಾರೆವೆ ನಾವು ಪುರಂದರವಿಠಲನ
ಬಾಲತನದಿಂದ ಭಾಳ ನಂಬಿದೆವಮ್ಮ
ಕಾಲದಲಿ ಒಂದಾಗಿ ಕಾಮಿನಿಜನರೆಲ್ಲ
ಆಲೋಚನೆ ಮಾಡಿ ಆಣೆಯಿಡುವ ಬನ್ನಿ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments