ಅಂಗಿ ತೊಟ್ಟೇನೆ, ಗೋಪಿ
( ರಾಗ ತೋಡಿ ಆದಿ ತಾಳ)
ಅಂಗಿ ತೊಟ್ಟೇನೆ, ಗೋಪಿ, ಶೃಂಗಾರವಾದೇನೆ
ಹಾಲ ಕುಡಿದೇನೆ, ಗೋಪಿ, ಆಕಳ ಕಾಯ್ದೇನೆ ||ಪ||
ಚಕ್ಕುಲಿ ಕೊಡು ಎನಗೆ, ಗೋಪಿ, ಅಕ್ಕರದಿ ಬಂದೆನೆ
ಗೊಲ್ಲರ ಮಕ್ಕಳ ಎಲ್ಲರೊಡಗೂಡಿ, ಹಲವು ಗೋವ್ಗಳ ಕಾಯ್ದು ಬಂದೆನೆ
ಅಮ್ಮಣ್ಣಿ ಕೊಡು ಎನಗೆ, ಗೋಪಿ, ಬೆಣ್ಣೆಯ ತೋರೆ ಮೇಲೆ
ಗಮ್ಮನೆ ತಟಕನೆ ಮೊಸರನೆ ಸವಿದು , ಸುಮ್ಮನೆ ತೊಟ್ಟಿಲೊಳು ಲೋಲಾಡುವೆನು
ಅಪ್ಪಚ್ಚಿ ಕೊಡು ಎನಗೆ, ಗೋಪಿ, ತುಪ್ಪವ ಕೊಡೆ ಮೇಲೆ
ಅಪ್ಪಗೆ ಹೇಳಿ ಟೊಪ್ಪಿಗೆ ಕೊಡಿಸೆ, ಉಪ್ಪು ಕಡಲೆಯನ್ನು ಚೀಲದಿ ತುಂಬುವೆ
ಚೆಂಡು ಕೊಡು ಎನಗೆ, ಗೋಪಿ, ಚಿನಿಕೋಲು ಬೇಕಲ್ಲ
ಗುಂಡು ಕಲ್ಲಿನಂಥ ಬುತ್ತಿಯ ಕಟ್ಟಿ, ಹಿಂಡು ಗೋವುಗಳ ಕಾಯ್ದು ಬಂದೆನೆ
ಈ ಲೀಲೆಗಳ ಕೇಳಿ, ಗೋಪಿ, ತೋಳಿನೊಳ್ ಬಿಗಿದಪ್ಪಿ
ಲೋಲ ಶ್ರೀಪುರಂದರ ವಿಠಲನ ಲೀಲೆಯಿಂದಲಿ ಬಾರೆನುತ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments