ಅಕ್ಕ ಎತ್ತಣ ಬಿಲ್ಲಹಬ್ಬ ಬಂತೆಮಗೆ
( ರಾಗ ಆನಂದಭೈರವಿ ಅಟ ತಾಳ)
ಅಕ್ಕ ಎತ್ತಣ ಬಿಲ್ಲಹಬ್ಬ ಬಂತೆಮಗೆ
ಪ್ರಾಣಕಾಂತನ ಕರದೊಯ್ವರು ಮಧುರೆಗೆ ||ಪ||
ಅಕ್ಕ ಮಧುರಾಪಟ್ಟಣದ ನಾರಿಯರು
ಅಕ್ಕ ಚದುರೆ ಚೆಲುವೆ ಚಪಲೆಯರು
ಅಕ್ಕ ಮದನಶಾಸ್ತ್ರದಿ ನಿಪುಣೆಯರು
ಸಿಕ್ಕ ಮಾಧವನ ಕಂಡರೆ ಅವರ್ ಬಿಡರು
ಅಕ್ಕ ಮೋಹನ ಕಾಣೆ ಮಧುರಾಪುರ
ಅಕ್ಕ ಮೋಹನ ನಾರಿಯರು ಉದಾರ
ಅಕ್ಕ ಮೋಹನ ಕಾಣೆ ಯಮುನಾ ತೀರ
ಅಕ್ಕ ಮೋಹನ ರಂಗ ಮನೆಗೆ ಬಾರ
ಅಕ್ಕ ಕರೆದು ಒಯ್ವರು ನಂದಕ್ರೂರ
ಅಕ್ಕ ಅಕ್ಕ ಬಂದೆ ಹೇಳುವ ನಂದಕ್ರೂರ
ಅಕ್ಕ ಧರೆಯೊಳಗೆಲ್ಲ ಅತಿಕ್ರೂರ
ಅಕ್ಕ ನಮಗಿರುವುದೆ ಬಿಡ ಸ್ಮರಚೋರ
ಅಕ್ಕ ಹೇಗೆ ಸೈರಿಸುವೆನರೆಘಳಿಗೆ
ಅಕ್ಕ ನಗಧರ ಬಾರನಲ್ಲ ಮನೆಗೆ
ಅಕ್ಕ ಹಗಲಿರುಳೆಂಬುದೊಂದು ಘಳಿಗೆಯಾಗೆ
ಅಕ್ಕ ಸಾಗಿಸಿ ಕಳುಹೆ ನನ್ನ ಬಳಿಗೆ
ಅಕ್ಕ ಮೋಹನ ಕಾಣೆ ಶ್ರೀರಂಗನು
ಅಕ್ಕ ಕರೆದರೆ ಓಡಿ ಬಾಹ ತಾನು
ಅಕ್ಕ ಬಾರ ಪುರಂದರ ವಿಠಲನು
ಅಕ್ಕ ಭಕುತರಿಗೆ ಸಿಕ್ಕಿ ಬಾಹನು
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments