ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ
( ರಾಗ ಪೀಲೂ ಅಟತಾಳ)
ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ ||ಪ||
ನೀನೇ ಆಡಿಸದಿರಲು ಜಡ ಒನಕೆಯ ಬೊಂಬೆ
ಏನು ಮಾಡಲು ಬಲ್ಲುದು ತಾನೆ ಬೇರೆ
ನೀನಿಟ್ಟ ಸೂತ್ರದಿಂ ಚಲಿಪವು ಕೈಕಾಲುಗಳು
ನೀನೇ ಮುಗ್ಗಿಸಲು ಮುಗ್ಗುವ ದೇಹದವನು ||
ಒಂದೆಂಟು ಬಾಗಿಲ ಪಟ್ಟಣಕ್ಕೆ ತನ್ನ-
ದೆಂದು ಇಪ್ಪತ್ತಾರು ಮನೆಯಾಳ್ಗಳ
ತಂದು ಕಾವಲ ನಿಲಿಸಿ ಎನ್ನ ನೀ ಒಳಗಿಟ್ಟ
ಮುಂದೆ ಭವದಲಿ ಭವಣಿಪುದನ್ಯಾಯ ||
ಯಂತ್ರ ವಾಹಕ ನೀನೇ ಒಳಗಿದ್ದು ಎನ್ನ ಸ್ವ-
ತಂತ್ರನೆಂದೆನಿಸಿ ಕೊಲಿಸುವರೆ ಹೇಳೊ
ಕಂತು ಪಿತ ಲಕ್ಷ್ಮೀಶ ಎಂತಾದಡಂತಹುದಾ-
ನಂತ ಮೂರುತಿ ನಮ್ಮ ಪುರಂದರ ವಿಠಲ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments