ಅಪಮಾನವಾದರೆ ಒಳ್ಳಿತು
( ರಾಗ ಪೂರ್ವಿ ಅಟ ತಾಳ)
ಅಪಮಾನವಾದರೆ ಒಳ್ಳಿತು
ಅಪರೂಪ ಹರಿನಾಮ ಜಪಿಸುವ ಮನುಜಗೆ ||ಪ||
ಮಾನದಿಂದ ಅಭಿಮಾನ ಪುಟ್ಟುವುದು
ಮಾನದಿಂದ ತಪ ಹಾನಿಯಾಗುವುದು
ಮಾನಿ ದುರ್ಯೋಧನಗೆ ಹಾನಿಯಾಯಿತು ಅನು-
ಮಾನವಿಲ್ಲ ಮಾನಾಪಮಾನಸಮನಿಗೆ ||
ಅಪಮಾನದಿಂದಲಿ ತಪ ವೃದ್ಧಿಯಾಗುವುದು
ಅಪಮಾನದಿಂದ ಪುಣ್ಯ ಸಫಲವಾಗುವುದು
ಅಪಮಾನದಿಂದಲಿ ನೃಪ ಧ್ರುವರಾಯಗೆ
ಕಪಟ ನಾಟಕ ಕೃಷ್ಣ ಅಪರೋಕ್ಷನಾದನು ||
ನಾನೇನು ಮಾಡಲಿ ಯಾರಲ್ಲಿ ಪೋಗಲಿ
ಕಾನನಚರರಾರಾಧ್ಯ ನೀನಿರಲು
ದೀನ ರಕ್ಷಕ ನಮ್ಮ ಪುರಂದರ ವಿಠಲ
ಏನು ಬೇಡೆನಗಪಮಾನವೇ ಇರಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments