ತಪ್ಪುಗಳೆಲ್ಲ ನೀನೊಪ್ಪಿಕೊಳ್ಳೋ

ತಪ್ಪುಗಳೆಲ್ಲ ನೀನೊಪ್ಪಿಕೊಳ್ಳೋ

(ರಾಗ ನಾದನಾಮಕ್ರಿಯೆ ಅಟತಾಳ ) ತಪ್ಪುಗಳೆಲ್ಲ ನೀನೊಪ್ಪಿಕೊಳ್ಳೋ ನ- ಮ್ಮಪ್ಪ ಕಾಯಬೇಕು ತಿಮ್ಮಪ್ಪ ನೀನೆ ||ಪ|| ಸತಿಸುತರಿಗೆ ಸಂಸಾರ ಬಲೆಗೆ ಅತಿ ಮತಿಹೀನನಾಗಿ ಸಿಕ್ಕೆ ಆಸೆಗಳಿಗೆ ಮಿತಿಗಾಣೆನಯ್ಯ ಎನ್ನ ಪಾಪಗಳಿಗೆ , ಮುಂದೆ ಗತಿ ಯಾವುದಯ್ಯ ಶ್ರೀಪತಿ ಎನಗೆ || ಬಿಸಿಲು ಮಳೆ ಬಿರುಗಾಳಿಯೊಳು , ಬಲು ದೆಸೆಗೆಟ್ಟೆ ತಿರುಗಿ ದೇಶದೇಶಗಳು ಹಸಿವು ತೃಷೆಗಳು ಬಲು ಬಾಧಿಸಲು , ಬಹು ಹುಸಿಯನಾಡಿದೆನಯ್ಯ ಹುಟ್ಟು ಮೊದಲು || ಸ್ನಾನ ಸಂಧ್ಯಾನವನೊಂದನರಿಯೆ , ಅನ್ನ- ಪಾನಗಳನು ನಾನೊಮ್ಮೆ ಮರೆಯೆ ಹೀನರ ಸಂಗ ಎಂದೆಂದು ತೊರೆಯೆ , ಸು- ಜ್ಞಾನಿಗಳನಿತ್ತ ಬಾ ಎಂದು ಕರೆಯೆ || ಜಪತಪದಲಿ ರೀತಿ ಭಾಷೆಯಿಲ್ಲ ಎ- ನ್ನಪರಾಧಗಳಿಗಿನ್ನು ಎಣಿಕೆಯಿಲ್ಲ ಚಪಲತನದಲಿ ಕಾಲ ಕಳೆದೆನಲ್ಲ , ಸ್ವಾಮಿ ಕಪಟನಾಟಕ ನೀನೆ ಬಲ್ಲೆಯಲ್ಲ || ಗಂಗೆ ಅಗ್ರೋದಕಗಳ ತಂದು ಸ್ನಾ- ನಂಗಳ ಮಾಡಿಸಲಿಲ್ಲ ಎಂದು ಹೊಂಗೇದಿಗೆ ಪುಷ್ಪವನೊಂದು ಶ್ರೀ- ರಂಗಗರ್ಪಿಸಲಿಲ್ಲ ಕಾಯೊ ಬಂದು || ಗಂಧಾಕ್ಷತೆ ಪುಷ್ಪಗಳಿಂದ ಒಂದು ದಳ ಶ್ರೀತುಳಸಿಯಿಂದ ಇಂದಿರೇಶನ ಅರ್ಚಿಸದರಿಂದ , ಬಹು ನೊಂದು ದೂರಾದೆ ಸದ್ಗತಿಯಿಂದ || ಪೀತಾಂಬರಾದಿ ವಸ್ತ್ರಗಳಿಂದ , ದಿವ್ಯ ನೂತನವಾದ ಆಭರಣದಿಂದ ಪ್ರೀತಿಪಡಿಸಲಿಲ್ಲಾದರದಿಂದ ಹೇ, ಸೀತಾಪತೇ ಕೃಷ್ಣ ಹರಿಮುಕುಂದ || ಧೂಪಾರತಿಯ ನಾ ಮಾಡಲಿಲ್ಲ , ಒಂದು ದೀಪವನಾದರೂ ಹಚ್ಚಲಿಲ್ಲ ಈ ಪರಿ ಕಳೆಯಿತೀ ಜನ್ಮವೆಲ್ಲ , ದೇವ ಆಪದ್ಭಾಂದವ ಕಾಯೋ ಲಕ್ಷ್ಮೀನಲ್ಲ || ಸೋಪಸ್ಕರವನು ಒಂದು ಮಾಡದೆ , ಎಲ್ಲ ಗೋಪಾಲಕೃಷ್ಣಗೆ ಅರ್ಪಿಸದೆ ಪಾಪಕರ್ಮಕ್ಕೆ ನಾ ಗುರಿಯಾದೆ , ಸ್ವಾಮಿ ಶ್ರೀಪತಿ ಕಾಯೊ ಎನ್ನ ಕೈ ಬಿಡದೆ || ಪಾಯಸ ಪಂಚಭಕ್ಷ್ಯಗಳಿಂದ ಆಯತವಾದ ಶಾಕಗಳಿಂದ ತೋಯ ಶಾಲ್ಯಾನ್ನ ಗೋಘೃತದಿಂದ , ಕೃಷ್ಣ- ರಾಯನರ್ಚಿಸಲಿಲ್ಲ ಭಕ್ತಿಯಿಂದ || ಮಂಗಳಾರತಿಯನು ನಾ ಮಾಡಲಿಲ್ಲ , ಜಯ ಮಂಗಳವೆಂದು ನಾ ಪಾಡಲಿಲ್ಲ ಕಂಗಳಿಂದಲಿ ನಿನ್ನ ನೋಡಲಿಲ್ಲ, ಮುದ್ದು ರಂಗನೆ ಬಾ ಎಂದು ಬೇಡಲಿಲ್ಲ || ಹರಿಯ ಪ್ರದಕ್ಷಿಣೆ ಮಾಡಲಿಲ್ಲ , ನರ- ಹರಿಯ ಪಾದಕೆ ನಾ ಬೀಳಲಿಲ್ಲ ಹರಿದಿನದುಪವಾಸ ಮಾಡಲಿಲ್ಲ , ಶ್ರೀ- ಹರಿದಾಸರೊಡನೆ ನಾ ಕೂಡಲಿಲ್ಲ || ಅತಿಥಿಗಳೆಂದು ಬಂದರೆ ಮನೆಗೆ ಗತಿಯಿಲ್ಲ ಕೂಡದು ಎಂದೆ ಎನಗೆ ಯತಿಗಳ ಕೂಡ ನಿಂದಿಸಿದೆ ಕೊನೆಗೆ , ಶ್ರೀ- ಪತಿ ದೃಷ್ಟಿಯಿಡು ಈ ಪಾಪಿ ಕಡೆಗೆ || ಹೋಮಾರ್ಚನೆ ಔಪಾಸನೆಯೆಲ್ಲ, ಎಂದೂ ನೇಮದಿಂದಲಿ ನಾ ಮಾಡಲಿಲ್ಲ ಕಾಮಾತುರದಿ ಕಂಡಕಂಡಲ್ಲೆಲ್ಲ , ರಾಮ ಭ್ರಾಮಕನಾಗಿ ತಿರುಗಿದೆನಲ್ಲ || ಎಷ್ಟು ಹೇಳಲಿ ಅವಗುಣಗಳೆಲ್ಲ , ಅವು ಅಷ್ಟು ಇಷ್ಟು ಎಂದು ಎಣಿಕೆಯಿಲ್ಲ ದೃಷ್ಟಿಯಿಂದಲಿ ನೋಡೋ ದೀನವತ್ಸಲ, ಸರ್ವ- ಸೃಷ್ಟಿಗೊಡೆಯ ಪುರಂದರವಿಟ್ಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು