ಜಯ ಜಯ ಶ್ರೀರಾಮ ನಮೋ

ಜಯ ಜಯ ಶ್ರೀರಾಮ ನಮೋ

(ರಾಗ ಭೈರವಿ ಆದಿತಾಳ) ಜಯ ಜಯ ಶ್ರೀರಾಮ ನಮೋ ಜಯ ಜಯ ಶ್ರೀ ಕೃಷ್ಣ ನಮೋ ||ಪ|| ಸಿರಿಯರಸನು ಶೃಂಗಾರವ ಮಾಡಿ ಶ್ರೀ ಗಂಧವನೆ ಹಣೆಗಿಟ್ಟು ತರುಣ ತುಲಸಿ ಮಾಲೆಯ ಧರಿಸಿ ಕರುತುರುಗಾಯಲು ಹೊರಗೆ ಹೊರಟನು ||ಅ|| ಹೊತ್ತು ಹೋಯಿತು ತುರು ಬಿಡಿರೆನ್ನುತ ಅಚ್ಯುತ ನುಡಿದ ಗೋಪಿಯರೊಡನೆ ತುತ್ತುರಿ ನಾದವು ತುರುರೆನ್ನುತ ಒತ್ತಿ ಸ್ವರದಿ ಪೊಂಗೊಳಲನೂದಲು || ಹರಿಸ್ವರವೆನ್ನುತ ಒಬ್ಬಳು ಪೋಗಿ ನೆರೆಮನೆಗ್ಹೋಗಿ ತಾ ಕೇಳಿದಳು ಒರಳ ಕೊಟ್ಟೀರಾ ಪರಮಾನ್ನ ಮಾಡಿ ತ್ವರದಿ ಮರಳಿ ತಂದಿಪ್ಪೆನೆನುತಲಿ || ವನಿತೆ ಸೌಟಿನೊಳಕ್ಕಿಯ ತೊಳೆಸಿ ಒನಕೇಲಿ ಓಗರ ಹದ ನೋಡಿ ಘನತರ ಸೀರೆ ತಲೆಗೆ ಸುತ್ತಿಕೊಂಡು ತನುವಿಗೆ ಕುಪ್ಪಸ ಸುತ್ತುತಲಿ || ದಿಟ್ಟನೋಲೆ ಮೊಣಕಾಲಿಗೆ ತಗಲಿಸಿ ಗಟ್ಟಿ ಕಂಕಣ ಕಿವಿಗಿಟ್ಟು ತೊಟ್ಟಿಲೊಳಗೆ ಶಿಶು ಅಳುವುದ ಕಂಡು ಕಟ್ಟಿದ ನವಿಲನು ತೂಗಿದಳು || ಅಂಗನೆ ಚೌರಿ ಕಾಲಿಗೆ ಕಟ್ಟಿ ಮುಂಗೈಗೆ ತಾಳಿಯ ಬಿಗಿದು ಶೃಂಗಾರ ಸರವ ನಡುವಿಗೆ ಕಟ್ಟಿ ರಂಗನ ಸ್ಮರಿಸುತ ಹೊರಗೆ ನಡೆದಳು || ಹಸುವಿಗಿಟ್ಟಳು ಹಾಲು ಓಗರವ ಬಿಸಿ ಮಡ್ಡಿಯ ಗಂಡಗೆ ಹಾಕಿ ಸೊಸೆಯನು ಅಟ್ಟಿ ತೊತ್ತನೆ ಪಾಲಿಸಿ ಮೊಸರು ಕಾಸಿ ಹೆಪ್ಪು ಕೊಡುತಲಿದ್ದಳು || ಗಿಳಿಗೆ ಹಾಸಿದಳು ಹಾಸು ಮಂಚವ ಅಳಿಯನ ಪಂಜರದೊಳಗಿರಿಸಿ ತಳಿಗೆಯನಿಟ್ಟು ತಮ್ಮನ ಮಲಗಿಸಿ ತೊಟ್ಟಿಲೊಳಗೆ ಎಡೆ ಮಾಡಿದಳು || ಅಟ್ಟವೆಂದ್ಹತ್ತಿ ಅಗಳಿಯ ಮೇಲೆ ಇಟ್ಟಳು ಸಾದೆಂದು ಸಗಣಿಯನು ಕಟ್ಟ ಬಾಯಿಗೆ ಕಾಡಿಗೆ ಹಚ್ಚಿ ಕೃಷ್ಣನ ಸ್ಮರಿಸುತ ಹೊರಗ್ಹೊರಟಳು ಸಕಿ || ಮಾನಿನಿ ಒಬ್ಬಳು ಸಂನ್ಯಾಸಿಯ ಕಂಡು ಧೇನಿಸಿ ಕೂಸೆಂದತ್ತಬರಲು ಏನು ಗಾಳಿ ಅವರಿಗೆ ಸೋಕಿತೆ ಎಂದು ಪುರಂದರವಿಠಲ ನಗುತಲಿದ್ದನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು