ಕೃಷ್ಣ ಎನಬಾರದೆ
(ರಾಗ ಸೌರಾಷ್ಟ್ರ ಛಾಪುತಾಳ )
ಕೃಷ್ಣ ಎನಬಾರದೆ , ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ||ಪ||
ನರಜನ್ಮ ಬಂದಾಗ ನಾಲಿಗೆ ಇರುವಾಗ , ಕೃಷ್ಣ ಎನಬಾರದೆ ||ಅ||
ಮಲಗಿದ್ದು ಮೈಮುರಿದು ಏಳುತಲೊಮ್ಮೆ, ಕೃಷ್ಣ ಎನಬಾರದೆ , ನಿತ್ಯ
ಸುಳಿದಾಡುತ ಮನೆಯೊಳಗದರು ಒಮ್ಮೆ , ಕೃಷ್ಣ ಎನಬಾರದೆ ||
ಮೇರೆ ತಪ್ಪಿ ಮಾತನಾಡುವಾಗಲೊಮ್ಮೆ , ಕೃಷ್ಣ ಎನಬಾರದೆ , ದೊಡ್ಡ
ದಾರಿಯ ನಡೆವಾಗ ಭಾರವ ಹೊರುವಾಗ , ಕೃಷ್ಣ ಎನಬಾರದೆ ||
ಗಂಧವ ಪೂಸಿ ತಾಂಬೂಲ ಮೆಲುವಾಗ , ಕೃಷ್ಣ ಎನಬಾರದೆ , ತನ್ನ
ಮಂದಗಮನೆ ಕೂಡ ಸರಸವಾಡುತಲೊಮ್ಮೆ , ಕೃಷ್ಣ ಎನಬಾರದೆ ||
ಪರಿಹಾಸ್ಯದ ಮಾತನಾಡುತಲೊಮ್ಮೆ , ಕೃಷ್ಣ ಎನಬಾರದೆ , ಪರಿಪರಿ
ಕೆಲಸದೊಳೊಂದು ಕೆಲಸವೆಮ್ದು , ಕೃಷ್ಣ ಎನಬಾರದೆ ||
ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ , ಕೃಷ್ಣ ಎನಬಾರದೆ ಬಹು
ಚೆಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ , ಕೃಷ್ಣ ಎನಬಾರದೆ ||
ನೀಗದಾಲೋಚನೆ ರೋಗೋಪದ್ರದಲೊಮ್ಮೆ , ಕೃಷ್ಣ ಎನಬಾರದೆ , ಒಳ್ಳೇ
ಭೋಗ ಪಡೆದು ಅನುರಾಗದಿಂದಿರುವಾಗ , ಕೃಷ್ಣ ಎನಬಾರದೆ ||
ದುರಿತರಾಶಿಗಳನು ತರಿದು ಬಿಸುಡಲು , ಕೃಷ್ಣ ಎನಬಾರದೆ, ಸದಾ
ಗರುಡವಾಹನ ಸಿರಿಪುರಂದರವಿಠಲನ್ನೇ , ಕೃಷ್ಣ ಎನಬಾರದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments