ಏನೆಂತೊಲಿವೆ , ನಿನ್ನವರಂತೆ ಕೆಡುಬುದ್ಧಿ ಎನ್ನೊಳಿಲ್ಲ
(ರಾಗ ಸೌರಾಷ್ಟ್ರ. ಅಟ ತಾಳ)
ಏನೆಂತೊಲಿದೆ ನಿನ್ನವರಂತೆ ಕೆಡುಬುದ್ಧಿ ಎನ್ನೊಳಿಲ್ಲ ಗುಣ-
ಹೀನರಲ್ಲದ ದೀನಜನರ ಪಾಲಿಪ ಬುದ್ಧಿ , ನಿನ್ನೊಳಿಲ್ಲ
ತರಳ ಪ್ರಹ್ಲಾದನಂದದಿ ನಿನ್ನ ರೂಪವ ಕೆಡಿಸಲಿಲ್ಲ
ನರನಂತೆ ನಾ ನಿನ್ನ ಬಂಡಿಬೋವನ ಮಾಡಿ ಹೊಡೆಸಲಿಲ್ಲ
ಸುರನದೀಸುತನಂತೆ ನೊಸಲಲ್ಲಿ ಬಾಣವ ನೆಡಿಸಲಿಲ್ಲ
ದೊರೆ ಅಂಬರೀಷನಂತೀರೈದು ಜನ್ಮವ ಪಡಿಸಲಿಲ್ಲ
ನಾರದನಂತೆ ಕಂಡವರ ಕೊಂಡೆಯ ಮಾತನಾಡಲಿಲ್ಲ
ಮಾರುತಿಯಂತೆ ನೀನುಣುತಿದ್ದ ಎಡೆಯ ಕೊಂಡೊಯ್ಯಲಿಲ್ಲ
ಆ ರುಕ್ಮಾಂಗದನಂತೆ ಸುತನ ಕೊಲ್ಲಲು ದೃಢ ಮಾಡಲಿಲ್ಲ
ಪರಾಶರನಂತೆ ನದಿಯೊಳಂಬಿಗ ಹೆಣ್ಣ ಕೊಡಲಿಲ್ಲ
ವಿದುರನ ತೆರನಂತೆ ಸದನವ ಮುರಿದು ನಾ ಕುಣಿಯಲಿಲ್ಲ
ಮದಗಜನಂತೆ ಮಕರಿಯ ಬಾಯೊಳು ಸಿಲುಕಿ ಒದರಲಿಲ್ಲ
ಬೆದರದೆ ಬಲಿಯಂತೆ ಭೂಮಿಯ ಧಾರೆಯನೆರೆಯಲಿಲ್ಲ
ಸದರ ಮಾತುಗಳಾಡಿ ಶಿಶುಪಾಲನಂದದಿ ಜರೆಯಲಿಲ್ಲ
ಅಗಣಿತ ಮಹಿಮ ನೀನೆಂದು ಧ್ರುವನಂತೆ ಪೊಗಳಲಿಲ್ಲ
ಭೃಗು ಮುನಿಯಂತೆ ಗರ್ವದಿ ನಿನ್ನ ಹೃದಯವನೊದೆಯಲಿಲ್ಲ
ಖಗ ರಾಜನಂತೆ ನಿನ್ನನು ಪೊತ್ತು ಲೋಕವ ತಿರುಗಲಿಲ್ಲ
ಅಗಜೆಯರಸನಂತೆ ಮಸಣದಿ ನಿನ್ನ ನಾಮ ನೆನೆಯಲಿಲ್ಲ
ಸನಕಾದಿ ಮುನಿಗಳಂತನುದಿನ ಮನದೊಳು ಸ್ಮರಿಸಲಿಲ್ಲ
ಇನಸುತ ಕಪಿಯಂತೆ ವಂದಿಸಿ ವಾಲಿಯ ಕೊಲಿಸಲಿಲ್ಲ
ಬಿನುಗು ಬೇಡಿತಿಯಂತೆ ಸವಿದುಂಡ ಹಣ್ಣನು ಮೆಲಿಸಲಿಲ್ಲ
ಘನ ಅಜಾಮಿಳನಂತೆ ಸುತನ ನಾರಗನೆಂದು ಕರೆಯಲಿಲ್ಲ
ವರ ಶೌನಕರಂತೆ ನಿತ್ಯ ಕಥೆಯ ಕೇಳಲಿಲ್ಲ
ನೆರೆ ತುಂಬುರನಂತೆ ರಂಭೆ ನಟಿಸಿ ಗೀತ ಪೇಳಲಿಲ್ಲ
ಉರಗಾಧಿ ಪತಿಯಂತೆ ಉದರದೊಳಿಂಬಿಟ್ಟು ನೋಡಲಿಲ್ಲ
ಪಿರಿದು ಕುಚೇಲನ ತೆರನಂತೆ ಅವಲಕ್ಕಿ ಕೊಡಲಿಲ್ಲ
ಬವರದೊಳು ವಿಭೀಷಣನಂತೆ ಅಣ್ಣನ ಕೊಲಿಸಲಿಲ್ಲ
ಯುವತಿ ದ್ರೌಪದಿಯಂತೆ ಶಾಕ ಪಾತ್ರೆಯೊಳೊಮ್ಮೆ ಮೆಲಿಸಲಿಲ್ಲ
ತವ ಪುಂಡಲೀಕನಂದದಿ ಇಟ್ಟಿಗೆಯ ಮೇಲೆ ನಿಲಿಸಲಿಲ್ಲ
ಇವರಂತೆ ದೇವ ಪುರಂದರ ವಿಠಲನ ಸ್ಮರಿಸಲಿಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments